ಶನಿವಾರ, ನವೆಂಬರ್ 24, 2012

ಪ್ರೇಮ ಮ್ರದಂಗ

ಹಸಿ ಹಸಿಯಾಗಿದೆ ಅವಳ ನೆನಪು
ಮಾಸದ ಅವಳ ಕೆಂದುಟಿಯ ನಗು
ಆಗಾಗ ಬಂದು ಕಣ್ಣಿಗೆ ಕಟ್ಟುತಿದೆ,
ಅವಳ ಕಿಲಕಿಲನಗು ಕಿವಿಗೆ ಇಂಪಾಗಿ ಕೇಳುತಿದೆ.




ನಡುಗುವ ಚಳಿಯಲ್ಲೂ ಬೆಚ್ಚನೆಯ ಅನುಭವ,
ಅವಳ ಇರುವಿಕೆ ದೂರವಿದ್ದರೂ ಸನಿಹಕೆ,
ನನಗಾಗಿ ಕಾಯುವ ಅವಳ ತುಡಿತ,
ನನ್ನ ಮನವ ದೋಚುವ ಇಂಗಿತ.




ನನ್ನರಿಯುವ ತವಕ,ನನಗಾಗಿ ತಪಸ್ಸು,
ಅವಳ ಮುಗ್ದ ಮಾತು ನನ್ನ ಪರವಶವಾಯಿಸಿತೇ?
ಅವಳ ತಾಳತಪ್ಪದ ಕಾಲ್ಗೆಜ್ಜೆಯ ಸದ್ದು
ನನ್ನೆದೆಯ ಪ್ರೇಮಮ್ರದಂಗವ ಬಾರಿಸಿತೇ?



ಮನಸಿನ ತುಂಬಾ ಪ್ರೇಮದ ಅರಮನೆಯ ಚಿತ್ತಾರ,
ಅದರೊಳಗವಳು ರಾಣಿಯಾಗಿ ಆಳುವಾಸೆ,
ಅವಳ ಹಂಬಲ ನನ್ನ ದಾಸನಾಗಿಸಿತೇ?
ಇವಳು  ಆ ನಿಶ್ಕಲ್ಮಶ ಪ್ರೀತಿಯ ಒಡತಿಯೇ?



ನೂರಾರು ಅಕ್ಷರಗಳ ಪ್ರಶ್ನೆಗೆ ಅವಳೇನಾ ಉತ್ತರ?
ಅವಳ ಪ್ರೀತಿಯ ಚಿಲುಮೆ ನನ್ನೆದೆಯ ಕಾರಂಜಿಯೇ?
ಅವಳ ಒಂದು ಹನಿ ಕಣ್ಣೀರಲಿ ನಾ ಕೊಚ್ಚಿಹೋಗುವೆನೇ?
ನನ್ನ ಈ ಸೋಲು ಅವಳ ಗೆಲುವು ಪ್ರೀತಿಗೆ ಸಂದ ಜಯವೇ?











- ನಾಗಭೂಷಣ ಗುಮಗೋಡು.

ಮಂಗಳವಾರ, ನವೆಂಬರ್ 20, 2012

ಕೋಗಿಲೆಯ ಕ೦ಠ ಮತ್ತೆ ಕೇಳಿಸಿತು

ಕೋಗಿಲೆಯ ಕ೦ಠ ಮತ್ತೆ ಕೇಳಿಸಿತು,
ಹಲವು ದಿನಗಳ ಬಳಿಕ..!
ಕೇಳಲು ಇಂಪಾಗಿತ್ತು,ನವಿರಾಗಿತ್ತು.
ಮನಸ್ಸಿಗೆ ಅದೆ೦ತದೋ ನೆಮ್ಮದಿ ತ೦ದಿತ್ತು.
 
ಕಪಟವಿಲ್ಲ, ಭಯವಿಲ್ಲ,
ಹೆದರಿಕೆಯಿಲ್ಲ,ತನ್ನ ತನದಲ್ಲಿ ತಾನಿತ್ತು,
ನೇರವಾಗಿತ್ತು,ದಿಟವಾಗಿತ್ತು,ಗಾನಸುಧೆ ಮೈದುಂಬಿತ್ತು,
ನಲ್ಮೆಯ ನಗು ಮನೆ ಮಾಡಿತ್ತು.
 
ಕಲ್ಮಶವಾಗಿರಲಿಲ್ಲ, ಪರಿಶುದ್ದವಿತ್ತು.
ಸ್ವಚ್ಚ ಬಿಳಿಬಣ್ಣವಿತ್ತು,ಲಕಲಕಿಸುತ್ತಿತ್ತು..
ಸುಶ್ರಾವ್ಯಕಂಠದಲಿ ಬಳಗವ ಕೂಗುತ್ತಿತ್ತು.
ಕರುಳಬಳ್ಳಿಯ ನಡುವೆ ಬದ್ದತೆ ಇತ್ತು.

ಸಾಧಿಸುವ ಛಲವಿತ್ತು,ಗೆದ್ದ ಧ್ವನಿಯಿತ್ತು,
ಮಾಮರದ ಸುವಾಸನೆಯಿತ್ತು,ಸಿಹಿಯಿತ್ತು,
ಮುಂಗಾರಿನ ಹನಿಯಿತ್ತು,ಚಿಟಪಟನೆ ಶಬ್ದವಿತ್ತು,
ಜಳಜಳನೆ ಹರಿವ ಜಲಧಾರೆಯಿತ್ತು.

ತಂಪಾದ ಗಾಳಿಯಿತ್ತು,ಮುಂಜಾವು ಕವಿದಿತ್ತು,
ನೇಸರನ ಹೊಂಬಣ್ಣ ಕೂಗುತ್ತಿತ್ತು,
ತನ್ನ ಪುನರಾಗಮನವ ಸೂಸುತ್ತಿತ್ತು,
ಮರಳಿ ಬರುವೆ ಸುಖವಾಗಿ ಎನ್ನುತ್ತಿತ್ತು..!



 

- ನಾಗಭೂಷಣ ಗುಮಗೋಡು.