ಭಾನುವಾರ, ಡಿಸೆಂಬರ್ 30, 2012

ಪ್ರೇಮದೀಪ

ಸುಮ್ಮನೆ ಚುಚ್ಚುತಿಹಳು..
ನನ್ನ ಮುದ್ದಿನ ಹುಡುಗಿ..
ನನ್ನೆದೆಯ ಪ್ರೀತಿ ಗೂಡ....
ತೋರು ನಿನ್ನೊಲುಮೆಯ ಗೆಳತಿಯನೆಂದು..





ಅವಳೇ ನನ್ನವಳು..ಹೇಗೆ ಹೇಳುವೆನು..??
ಅವಳಿಗೂ ಗೊತ್ತು..ನಾನೇ ತನ್ನವಳೆಂದು.
ಸುಮ್ಮನೆ ಕಾಡುತಿಹಳು ದಿಕ್ಕೆಡುವಂತೆ..
ನಾನೇ ಉಲಿಯಲಿ ಪ್ರೀತಿಮಾತನೆಂದು..



ಅವಳ ಮಾತು ನನಗೆ ಮುತ್ತು.
ಅವಳ ಕಣ್ಣುಗಳ ಪ್ರಖರ ನನ್ನ ಪ್ರೇಮ ಕಾಂತಿ.
ಅವಳ ನಗು ನನ್ನ ಪ್ರೇಮದ ನಗಾರಿ..
ಆದರೂ ತರಿಸುವಳು ಒಮ್ಮೊಮ್ಮೆ ಹುಸಿಮುನಿಸ.



ಅವಳ ಕಂಬನಿ ನನಗೆ ಧರ್ಮಸಂಕಟ,,
ಹೇಗೆ ಹೇಳಲಿ ನನ್ನ ಮನದ ತುಮುಲ.
ಅವಳ ಮುಗ್ದ ಮಾತು ನನಗೆ ಪ್ರೇಮಚರಿತೆ..
ಅವಳು ನನ್ನ ಕಾವ್ಯದೀಪ ಪ್ರೇಮದೀಪ..



ಅವಳ ಮನಸು ಒಂದು ಬಣ್ಣ ಬಣ್ಣದ ಚಿತ್ತಾರ,
ಕಲೆಗಾರ ನಾನು..ಬಿಡಿಸಿದೆ ಅವಳ ಮನಸಲ್ಲಿ ಕನಸಿನ ವಿನ್ಯಾಸ.
ಕೋಪದ ತುದಿಯಲ್ಲಿ ಪ್ರೀತಿಯ ಬಯಕೆ ನನ್ನಾಕೆಗೆ..
ಅವಳ ತಿಳಿನೀರ ಮನಸಲಿ ಹರಿಯುವ ಮೀನು ನಾನು.




- ನಾಗಭೂಷಣ ಗುಮಗೋಡು.

ಗುರುವಾರ, ಡಿಸೆಂಬರ್ 20, 2012

"ಛಲವೊಂದಿದ್ದರೆ ಮಾರ್ಗ"


"ಮಾಡಿದ್ದುಣ್ಣೋ ಮಹರಾಯ" ಎಂಬ ನಾಣ್ಣುಡಿಯನ್ನು ಎಲ್ಲರೂ ಕೇಳಿರುತ್ತಾರೆ.ಅಂದರೆ ನಾವು ಏನು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಪ್ರತಿಫಲ ಎಂಬರ್ಥ.ದುಡಿದು ಕೆಲಸ ಮಾಡು,ಬಗ್ಗಿ ಕೆಲಸಮಾಡು,ಜವಾಬ್ದಾರಿ ಹೊತ್ತು ಕೆಲಸ ಮಾಡು ಎಂದು ಜನ ಆಡುತ್ತಾರೆ.ಅದಕ್ಕೆ ತಕ್ಕಂತೆ ಸಂಬಳ,ಕೂಲಿ,ದೈನಂದಿನ ಅಗತ್ಯತೆಗೆ ಅನುಕೂಲಕರ ರೀತಿ ನಿರ್ಮಾಣವಾಗುವುದು ಸುಳ್ಳಲ್ಲ.ಆದರೆ ಈ ಕೆಲಸ ಮಾಡುವುದು ಹೇಗೆ?.ಒಂದು ಅಡಿಗೆ ಸಿದ್ದಪಡಿಸುವಾಗ ಮುಖ್ಯವಾಗಿ ಕಟ್ಟಿಗೆ,ಒಲೆ,ಉರಿ,ಪಾತ್ರೆ,ಅಡುಗೆಗೆ ಬೇಕಾದ ಸಾಮಾಗ್ರಿಗಳು ಅಗತ್ಯ.ನಂತರ ಅದನ್ನು ನಮಗೆ ಬೇಕಾದ ರೀತಿ ಅಡುಗೆ ಸಿದ್ದಪಡಿಸಿ ಸಂತ್ರಪ್ತಿಯಾಗಿ ಉಣ್ಣಬೇಕು.ಆಗಲೇ ಮನಸ್ಸಿಗೊಂದು ರೀತಿ ಸಂತಸ,ನೆಮ್ಮದಿ.

 

ಹಾಗೆಯೇ ಮಾನವನ ಜೀವಿತದ ಪ್ರತಿಯೊಂದು,ಘಳಿಗೆಯಲ್ಲೂ ಕಟ್ಟಿಗೆ,ಒಲೆ,ಪಾತ್ರೆ,ಉರಿ ಇರಲೇಬೇಕು.ಮಾನವನ ಜೀವನ ಒಂದು ಅಡುಗೆ ಪದಾರ್ಥದಂತೆ.ಅದು ಚೆನ್ನಾಗಿ ಬೆಂದಾಗಲೇ ಅಡುಗೆ ರುಚಿಯಿರುವುದು.ಅಂದರೆ ಜೀವನ ಸಾರ್ಥಕವಾಗುವುದು.ಏನು ಮಾಡಿದರೆ ಏನು ಸಿಗುವುದು? ಎಂಬ ನಿಚ್ಚಳ ಹುಡುಕಾಟದ ಬದುಕೇ ಸಾಧನೆಯತ್ತ ಅನವರತ ಪಯಣ.

 

ಸಾಧನೆಯ ಹಾದಿ ತುಳಿಯುವಾಗ,ಮೊದಲು ಕಷ್ಟ ಮತ್ತು ನೋವುಗಳೆಂಬ ಕಲ್ಲು ಮುಳ್ಳುಗಳ ಮೇಲೆ ನಡೆಯಬೇಕು.ಜೀವನ ಚಕ್ರದ ಗಾಲಿ ಮೊದಮೊದಲು ಕಲ್ಲುಮುಳ್ಳುಗಳ ದಾಳಿಗೆ ಸಿಕ್ಕಿ ಹೊಯ್ದಾಡುವುದು.ಕಟ್ಟಿದ ಕನಸು ಬೀಳುವುದೋ?ಎಂದೆನಿಸುವುದು ಇದು ಮಾನವನ ಅಂತಃಕರಣದ ಆತಂಕ ಎಂದರೆ ತಪ್ಪಿಲ್ಲ.ಆದರೆ ಕಲ್ಲುಮುಳ್ಳಿನ ಹಾದಿಯ ನಂತರ,ಮಣ್ಣಿನ ರಸ್ತೆ ಬರುವುದು,ಅದಾದ ನಂತರ ಡಾಂಬರು ರಸ್ತೆ  ಕೊನೆಗೆ ಕಾಂಕ್ರೀಟ್ ರಸ್ತೆಯೂ ಬರುವುದು.ಕಾಂಕ್ರೀಟ್ ರಸ್ತೆ ಬಂತೆಂದರೆ ಸಿದ್ದಪಡಿಸಿದ ಅಡುಗೆ ಸವಿಯಲು ಸಿದ್ದ ಎಂದು ಭಾವಿಸಬಹುದು.ನಂತರ ಅದನ್ನು ಸೇವಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ.ಅಂದರೆ ನಮ್ಮ ಜೀವನದ ಸಾಧನೆಯೊಂದಿಗಿನ ಪಯಣ ,ಧ್ರಢ ವಿಶ್ವಾಸ,ಛಲ,ನಂಬಿಕೆಯೊಂದಿಗೆ ಸಾಗಿ ಯಶಸ್ಸಿನ ಗುರಿ ತಲುಪಿತು ಎಂದು ತಿಳಿಯಬಹುದು.

 

ನಮ್ಮ ಸುತ್ತಮುತ್ತಲು ನಾನಾ ಬಗೆಯ ಜೀವನ ಶೈಲಿಯ ಜನರಿದ್ದಾರೆ.ಒಬ್ಬೊಬ್ಬರದು ಒಂದೊಂದು ಕಥೆ,ವ್ಯಥೆ.ಅವರಲ್ಲಿ ಕುಂಟರು,ಕಿವುಡರು,ಮೂಗರು,ಅನಾಥರು,ಭಿಕ್ಷುಕರು,ಗಂಜಿ ಕಾಣದವರು,ರಸ್ತೆಯಲ್ಲೇ ಓಡಾಡದವರು,ವಿಧವೆಯರು,ಸಾಲ ಮಾಡಿದವರು ಹೀಗೆ ನೋವು ನಲಿವುಗಳ ಜನತೆಯ ಪಟ್ಟಿ ಬೆಳೆಯುತ್ತದೆ.ಇಂತಹ ಸಮಾಜದ ನಡುವೆ,ಘಾತುಕ ಶಕ್ತಿಗಳ ವಿರುದ್ದ ಹೋರಾಡಿ ನಮ್ಮತನವನ್ನು ನಾವು ಕಂಡುಕೊಳ್ಳಬೇಕಿದೆ.ಇಂದಿನ ಜನ ದಡ್ಡರಲ್ಲ.ಆದರೆ ಅವರಲ್ಲಿ ದುಡಿಯುವ ಛಲವಿಲ್ಲ.ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯೂ ಉಂಟು.ನಮ್ಮಲ್ಲಿ ಕನಸು ಕಾಣುವವರಿಗೆ ಕೊರತೆಯಿಲ್ಲ,ಆಸೆಯೂ ಬಹಳಷ್ಟು.ಆದರೆ ಅದನ್ನು ಈಡೇರಿಸುವ ಕಲೆ ನಮ್ಮಲ್ಲಿ ಇನ್ನೂ ಬರಬೇಕಿದೆ.ಅದು ನಮ್ಮ ಅಂತಃಶಕ್ತಿಯಲ್ಲೇ ಇದೆ.

 

ನಮ್ಮ ಮನೋನಂದನದ ಕವಾಟ ತೆರೆದಾಗ ಅಲ್ಲಿ ಸಾಧಿಸುವ ನೂರಾರು ಹಾದಿಗಳು ಗೋಚರವಾಗುತ್ತದೆ.ದುಡಿಮೆ,ಹಣ ಇವುಗಳ ಜೊತೆ ಜೀವನ ಸಾಗುತ್ತದೆ.ಕಣ್ಣೀರಿನಲ್ಲೇ ಒದ್ದೆಯಾದ ದೇಹ, ಎಳನೀರ ಸ್ನಾನಕ್ಕೆ ಸಿದ್ದವಾಗುತ್ತದೆ.ಅದಕ್ಕೆ ಪರಿಶ್ರಮ ಅತ್ಯಗತ್ಯ.ನಾವು ಬೆಳೆದಂತೆ ಇನ್ನೊಬ್ಬರನ್ನು ಬೆಳೆಸಬೇಕು.ಆಗ ನಮ್ಮ ತಿಳುವಳಿಕೆಯ ಮಟ್ಟ ಏರುತ್ತಾ ಹೋಗುತ್ತದೆ.ಮಾನವನ ಜೀವನದ ವಿವಿಧ ಸ್ಥರಗಳು ಕೇವಲ ಸಾವು ,ಬದುಕಿನ ಕೊಂಡಿಯಲ್ಲ.ಅದು ಮಾನವನ ಹಿರಿಮೆಗೆ ಇರುವ ಕಾಲಾವಕಾಶಗಳು.ಚಿಕ್ಕ ಕೂಲಿಯವನಿಂದ ಹಿಡಿದು ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸಮಾಡುವವನಿಗೂ ಇರುವ ಅಗತ್ಯತೆ ಸಾಧನೆ ಮಾತ್ರ.ಅದು ಕುಳಿತು ಉಣ್ಣಲು ನೆರವಾಗುವುದು.

 

ಜೀವನದಲ್ಲಿ ಕೆಲವು ಅಚ್ಚರಿಯ ಮೈಲುಗಲ್ಲುಗಳುಂಟು,ಅದು ನಮ್ಮ ಜೀವನದಲ್ಲೇ ಯಾಕಾಗಬಾರದು?ಕೆಲವು ನಿಯಮಿತ ತಪಸ್ಸನ್ನಾಚರಿಸಿದರೆ ಅದು ನಮ್ಮನ್ನು ಅತಿಥಿಯೆಂದು ಭಾವಿಸಿ,ಅತಿಥಿ ದೇವೋಭವ ಎಂದು ನಮ್ಮ ಬಳಿ ಬರುವುದು.ಸಾಧನೆಗಿಂತ ಮಿಗಿಲಾದುದು ಯಾವುದೂ ಇಲ್ಲ.ಹಣ ಕೇವಲ ಕೀರ್ತಿ ,ಹಿರಿಮೆ,ಶ್ರೀಮಂತಿಕೆಯನ್ನು ತರಬಹುದೇ ವಿನಾ ನಮ್ಮ ಮನಸ್ಸುನ್ನು ಅದು ಶ್ರೀಮಂತಗೊಳಿಸುವುದಿಲ್ಲ.ಅದು ಶ್ರೀಮಂತವಾಗಲು ಯಶಸ್ಸು,ಸಾಧನೆ ಮುಖ್ಯ.ಸಾಧಿಸಿದವನನ್ನು ಹಣ ಹುಡುಕಿಕೊಂಡು ಬರುತ್ತದೆ.ಅವನ ಕಷ್ಟ ನಿವಾರಣೆಯಾಗುವುದು.ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು."ಛಲವೊಂದಿದ್ದರೆ ಮಾರ್ಗ" ಸಾಧನೆಯ ಹಾದಿ ಬಹು ಸರಳ.ಯಾವ ವ್ಯಕ್ತಿಯೂ ಆಸೆಗಳಿಲ್ಲದೆ ಇರಲಾರ.ಹಾಗಂತ ಅದೆಲ್ಲಾ ಈಡೇರುವುದಿಲ್ಲ.ಸಿಕ್ಕ ಅವಕಾಶದಲ್ಲಿ ಯೋಜನೆಗಳನ್ನು ರೂಪಿಸಿ ಯಶಸ್ಸು ಎಂಬ ದೇವಾಲಯದ ಒಂದೊಂದೇ ಮೆಟ್ಟಿಲು ಏರಿದರೆ ಸಾಧನೆಯೆಂಬ ದೇವರಿಗೆ ಕೈಮುಗಿಯಲು ಸಾಧ್ಯ.

 

ಛಲದ ಹಾದಿ,ಸಾಧನೆಯತ್ತ ಪಯಣ ಹಠವಾದಿ ಮಾನವನ ಜೀವಿತದ ಸಾರ್ಥಕ ಕ್ಷಣ.ಇದು ನಮಗೂ,ನಿಮಗೂ, ಎಲ್ಲರಲ್ಲೂ ಸಾಧ್ಯ.ಮಾಡುವ ಮನಸ್ಸು,ಛಲ,ಧ್ರಡ ಸಂಕಲ್ಪ ನಮ್ಮನ್ನು ಆಕಾಶದ ನಕ್ಷತ್ರವಾಗಿಸಬಲ್ಲದು.ಯುಗಯುಗಗಳಲ್ಲಿ ನಮ್ಮ ಹೆಸರು ಮಿನುಗಬಲ್ಲದು.ನಮ್ಮಲ್ಲಿನ ಗಾಢನಿದ್ರೆಯಲ್ಲಿರುವ ನಮ್ಮ ಛಲ,ಸಾಧನೆಯ ಮನಸ್ಸುನ್ನು ಬಡಿದೆಬ್ಬಿಸಿದರೆ ಅದು ಮಾಡುವ ಕಾರ್ಯ ಸ್ವತಃ ನಿಮಗೇ ಆಶ್ಚರ್ಯವಾಗುವುದು.ನೂರಾರು ಜನರ ಬಾಯಲ್ಲಿ ನೀವು ನಲಿದಾಡಬಹುದು.ಹಿಂದೆ ಟೀಕಿಸಿದ ಜನ ಈಗ ನಿಮ್ಮ ಬಳಿ ಬರಬಹುದು,ನಿಮ್ಮ ಸಹಾಯ ಕೇಳಬಹುದು,ನಿಮ್ಮನ್ನೇ ಅವಲಂಬಿಸಬಹುದು.ಇದೆಲ್ಲಾ ಸಾಧ್ಯ.ಹೌದು!!,ಅದು ನಿಮ್ಮಿಂದ ,ನಿಮಗಾಗಿ,ನಿಮಗೋಸ್ಕರ ನಿಮ್ಮಲ್ಲೇ ಇರುವ ಛಲ,ನಂಬಿಕೆ,ಆತ್ಮವಿಶ್ವಾಸ,ಸಾಧನೆಯತ್ತ ನಿಮ್ಮ ತುಡಿತದಿಂದ,ನಿಮಗೆ ಗೊತ್ತಾಗದಂತೆ ನೀವು ಯಶಸ್ಸಿನ ಶಿಖರ ಏರಬಹುದು.ಅದು ನಿಮ್ಮ ಕೈಯಲ್ಲೇ ಇದೆ."ಏಳಿ,ಎದ್ದೇಳಿ,ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ವಿದ್ಯುತ್ ವಾಣಿಯನ್ನು ನಾವು ಅನುಸರಿಸಬೇಕು.ನಮ್ಮ ಛಲವೇ ನಮ್ಮ ಯಶಸ್ಸಿನ ದಾರಿದೀಪವಾಗಬೇಕು.

 

- ನಾಗಭೂಷಣ ಗುಮಗೋಡು.

ಮಂಗಳವಾರ, ಡಿಸೆಂಬರ್ 11, 2012

ಮುನ್ನುಡಿ


ತುಸು ನಗುವು ಅವಳ ತುಟಿಗಳಲಿ
ನನ್ನ ಮಾತು ಕೇಳಿಸಿದಾಗ
ತುಂಬಿತ್ತು ಕಣ್ಣಹನಿ ಕೆಂಪೇರಿದ ಕಣ್ಣಲ್ಲಿ
ನನ್ನ ಮನ ನೊಂದು ಬೆಂದಾಗ.



ಜೀವಕ್ಕೆ ಜೊತೆಯಾದ ನಿನ್ನ ಒಲವು..
ಕಷ್ಟ ಬಂದರೂ ಮೆಟ್ಟಿನಿಲ್ಲುವ ನಿನ್ನ ನಿಲುವು.
ಪ್ರಿಯಕರನ ಕೊರಳ ಬಂಧಿಸಿದಾಗ
ಮಧುರ ಮಾತಿನ ಬಾಡೂಟ.



ತೋರಗೊಡೆ ನೀ ನಿನ್ನ ಪ್ರೇಮವ,
ತೋರಿದೆ ನೀ ನನ್ನ ಹೃದಯದಿ..
ಕಡಲ ಅಲೆಗಳಂತೆ ರಭಸದಲಿ..
ಈ ನಿನ್ನ ಪ್ರೀತಿ ಪ್ರಶಾಂತ ಕಾಲುವೆಯಂತೆ.



ನಿನ್ನ ಮುದ್ದಿನ ಮಾತೊಂದು ಸಾಕು
ಅದೇ ನನ್ನ ಸುಟ್ಟ ಭಾವನೆಗಳಿಗೆ ಮದ್ದು..
ನಿನ್ನ ನಗು ನನ್ನೆದೆಯ ದಾರಿದೀಪ..
ನೀ ಕೊಟ್ಟ ಸಿಹಿಮುತ್ತು ನನಗದೇ ಆಶಾಕಿರಣ.



ನೀ ಬರೆದೆ ಪ್ರೇಮಕಾವ್ಯವನು..
ತಣ್ಣನೆ ಹಾಕಿದೆ ನಾ ಕೆಳಗೊಂದು  ಸಹಿ..
ಚಂದನದ ಗೊಂಬೆಗೆ ಕುಂಕುಮದ ತಿಲಕ..
ಎರಡು ಹೃದಯಗಳ ಬೆಸುಗೆಗೆ ನೀ ಬರೆದೆ ಮುನ್ನುಡಿ.




- ನಾಗಭೂಷಣ ಗುಮಗೋಡು.

ಶನಿವಾರ, ನವೆಂಬರ್ 24, 2012

ಪ್ರೇಮ ಮ್ರದಂಗ

ಹಸಿ ಹಸಿಯಾಗಿದೆ ಅವಳ ನೆನಪು
ಮಾಸದ ಅವಳ ಕೆಂದುಟಿಯ ನಗು
ಆಗಾಗ ಬಂದು ಕಣ್ಣಿಗೆ ಕಟ್ಟುತಿದೆ,
ಅವಳ ಕಿಲಕಿಲನಗು ಕಿವಿಗೆ ಇಂಪಾಗಿ ಕೇಳುತಿದೆ.




ನಡುಗುವ ಚಳಿಯಲ್ಲೂ ಬೆಚ್ಚನೆಯ ಅನುಭವ,
ಅವಳ ಇರುವಿಕೆ ದೂರವಿದ್ದರೂ ಸನಿಹಕೆ,
ನನಗಾಗಿ ಕಾಯುವ ಅವಳ ತುಡಿತ,
ನನ್ನ ಮನವ ದೋಚುವ ಇಂಗಿತ.




ನನ್ನರಿಯುವ ತವಕ,ನನಗಾಗಿ ತಪಸ್ಸು,
ಅವಳ ಮುಗ್ದ ಮಾತು ನನ್ನ ಪರವಶವಾಯಿಸಿತೇ?
ಅವಳ ತಾಳತಪ್ಪದ ಕಾಲ್ಗೆಜ್ಜೆಯ ಸದ್ದು
ನನ್ನೆದೆಯ ಪ್ರೇಮಮ್ರದಂಗವ ಬಾರಿಸಿತೇ?



ಮನಸಿನ ತುಂಬಾ ಪ್ರೇಮದ ಅರಮನೆಯ ಚಿತ್ತಾರ,
ಅದರೊಳಗವಳು ರಾಣಿಯಾಗಿ ಆಳುವಾಸೆ,
ಅವಳ ಹಂಬಲ ನನ್ನ ದಾಸನಾಗಿಸಿತೇ?
ಇವಳು  ಆ ನಿಶ್ಕಲ್ಮಶ ಪ್ರೀತಿಯ ಒಡತಿಯೇ?



ನೂರಾರು ಅಕ್ಷರಗಳ ಪ್ರಶ್ನೆಗೆ ಅವಳೇನಾ ಉತ್ತರ?
ಅವಳ ಪ್ರೀತಿಯ ಚಿಲುಮೆ ನನ್ನೆದೆಯ ಕಾರಂಜಿಯೇ?
ಅವಳ ಒಂದು ಹನಿ ಕಣ್ಣೀರಲಿ ನಾ ಕೊಚ್ಚಿಹೋಗುವೆನೇ?
ನನ್ನ ಈ ಸೋಲು ಅವಳ ಗೆಲುವು ಪ್ರೀತಿಗೆ ಸಂದ ಜಯವೇ?











- ನಾಗಭೂಷಣ ಗುಮಗೋಡು.

ಮಂಗಳವಾರ, ನವೆಂಬರ್ 20, 2012

ಕೋಗಿಲೆಯ ಕ೦ಠ ಮತ್ತೆ ಕೇಳಿಸಿತು

ಕೋಗಿಲೆಯ ಕ೦ಠ ಮತ್ತೆ ಕೇಳಿಸಿತು,
ಹಲವು ದಿನಗಳ ಬಳಿಕ..!
ಕೇಳಲು ಇಂಪಾಗಿತ್ತು,ನವಿರಾಗಿತ್ತು.
ಮನಸ್ಸಿಗೆ ಅದೆ೦ತದೋ ನೆಮ್ಮದಿ ತ೦ದಿತ್ತು.
 
ಕಪಟವಿಲ್ಲ, ಭಯವಿಲ್ಲ,
ಹೆದರಿಕೆಯಿಲ್ಲ,ತನ್ನ ತನದಲ್ಲಿ ತಾನಿತ್ತು,
ನೇರವಾಗಿತ್ತು,ದಿಟವಾಗಿತ್ತು,ಗಾನಸುಧೆ ಮೈದುಂಬಿತ್ತು,
ನಲ್ಮೆಯ ನಗು ಮನೆ ಮಾಡಿತ್ತು.
 
ಕಲ್ಮಶವಾಗಿರಲಿಲ್ಲ, ಪರಿಶುದ್ದವಿತ್ತು.
ಸ್ವಚ್ಚ ಬಿಳಿಬಣ್ಣವಿತ್ತು,ಲಕಲಕಿಸುತ್ತಿತ್ತು..
ಸುಶ್ರಾವ್ಯಕಂಠದಲಿ ಬಳಗವ ಕೂಗುತ್ತಿತ್ತು.
ಕರುಳಬಳ್ಳಿಯ ನಡುವೆ ಬದ್ದತೆ ಇತ್ತು.

ಸಾಧಿಸುವ ಛಲವಿತ್ತು,ಗೆದ್ದ ಧ್ವನಿಯಿತ್ತು,
ಮಾಮರದ ಸುವಾಸನೆಯಿತ್ತು,ಸಿಹಿಯಿತ್ತು,
ಮುಂಗಾರಿನ ಹನಿಯಿತ್ತು,ಚಿಟಪಟನೆ ಶಬ್ದವಿತ್ತು,
ಜಳಜಳನೆ ಹರಿವ ಜಲಧಾರೆಯಿತ್ತು.

ತಂಪಾದ ಗಾಳಿಯಿತ್ತು,ಮುಂಜಾವು ಕವಿದಿತ್ತು,
ನೇಸರನ ಹೊಂಬಣ್ಣ ಕೂಗುತ್ತಿತ್ತು,
ತನ್ನ ಪುನರಾಗಮನವ ಸೂಸುತ್ತಿತ್ತು,
ಮರಳಿ ಬರುವೆ ಸುಖವಾಗಿ ಎನ್ನುತ್ತಿತ್ತು..!



 

- ನಾಗಭೂಷಣ ಗುಮಗೋಡು.

ಭಾನುವಾರ, ಅಕ್ಟೋಬರ್ 21, 2012

ಪಿಸುಮಾತು

ಅವಳ ಮಾತು ನಿದ್ದೆಗೆಡಿಸಿತು,
ಅವಳ ನಗುವಿನ ಆಳ ಮನ ಅರಳಿಸಿತು,.
ಅವಳ ಮುಗ್ದ ಕಣ್ಣುಗಳು ಪ್ರೀತಿಯ ಮಾತನಾಡಿಸಿತು,
ಅವಳ ಅಗಲಿಕೆಯ ನೋವು ಇಂದೆನಗೆ ಕಾಡಿತು.


ಅವಳ ಮಾತು ಹೊಳೆಯುವ ಸ್ಪಟಿಕದಂತೆ,
ಮಗುವಿನ ಅವಳ ಮನಸ್ಸು ನನ್ನ ಮಗುವಾಗಿಸಿತು,
ಅವಳ ಕಿವಿಯ ಓಲೆ ನನ್ನ ಉಯ್ಯಾಲೆಯಾಡಿಸಿತು.
ಅವಳ ಹಣೆಯ ಕುಂಕುಮದ ಬಿಸಿ ಎನಗೆ ತಾಕಿತು.


ಅಲ್ಲಿತ್ತು ಕನಸು ನೂರಾರು,
ಭಾವನೆಗಳ ಗಾಳಿಪಟ ಎರಡು ಮನಸಿನ ಪಿಸುಮಾತು
ಅವಳಗುಳಿ ಕೆನ್ನೆಯಲ್ಲಿ ಅರಳಿತ್ತು ಸಂತಸದ ಬಿಂಬ.
ಚಿತ್ತಾರ ಬಿಡಿಸಿತ್ತು ಅವಳ ಸಿಹಿಮುತ್ತು..


ಕಣ್ಣಿಟ್ಟು ನೋಡಿದೆ ಅವಳ ಕಣ್ಣಲ್ಲಿ,
ಸಾವಿರ ಆನೆಯ ಬಲ ತುಂಬಿತು ನನ್ನ ಮನದಲ್ಲಿ,
ಅದೇನೋ ಹೊಸ ಹೊಸ ವಿಸ್ಮಯಕಾರಿ ಪ್ರಪಂಚ,
ಮಿಡಿವ ಮನಸಿಗೆ ಪ್ರೀತಿಯ ಸಲಾಕೆ.


ಅವಳ ಚಿಂತೆ ನನಗೆ ನೋವು,
ಅವಳ ಅಳು ನನಗೆ ಆಘಾತ,
ಅವಳ ಪ್ರೀತಿಯ ನುಡಿ ನನಗೆ ಸ್ವರ್ಗದ ಬಾಗಿಲು,
ಅವಳ ಹೂ ನಗೆ ನನಗೆ ಸವಿಮಾತಿನ ಭರವಸೆ.




-ನಾಗಭೂಷಣ ಗುಮಗೋಡು.

ಶುಕ್ರವಾರ, ಅಕ್ಟೋಬರ್ 19, 2012

ಎದ್ದು ಬಾ ಗೆಳೆಯಾ

ಕವಿದ ಕಾರ್ಮೋಢ ಸೀಳಿ ಬಾ ನೀನು ಮಿಂಚಂತೆ,
ಸಿಡಿಲಿಗಿಂತ ಬಿರುಸಾಗಿ ಎದ್ದು ಬಾ,
ಅನ್ಯಾಯ ಅನಾಚಾರವ ಬಡಿದಟ್ಟು ಬಾ,
ಕೆಚ್ಚೆದೆಯ ದಿಟ್ಟ ಹೆಜ್ಜೆ ಇಟ್ಟು ಬಾ..

ಸಾಂಸ್ಕ್ರತಿಕ ನಡೆನುಡಿಯ ನೀ ತೋರು ಬಾ,
ಸಜ್ಜನ ಸಂಪನ್ನನಾಗಿ ಬಾ,
ಹುಸಿಯ ನುಡಿಯದಿರು,ಸತ್ಯವೇ ನಮ್ಮ ತಾಯಿ,ತಂದೆ,
ಕಡಲ ಬೋರ್ಗರೆತವ ಮೀರುವ ಕೊಳಲಿನ ಧ್ವನಿಯಾಗು ಬಾ,


ಯಾರೂ ಅಳಿಸಲಾಗದಂತ ಅಚ್ಚಳಿ ನೀನಾಗು ಬಾ,
ಎದ್ದು ಬಾ ಗೆಳೆಯಾ,ಕಲ್ಲು ಮುಳ್ಳುಗಳ ಸರಿಸಿ ಬಾ,
ವಿಷಕಾರುವ ಸರ್ಪಗಳಿಗೆ ವಿಷಕಂಠನಾಗಿ ಬಾ,
ಹದ್ದಿನಂತೆ ಎರಗುವವರ ಸದ್ದಡಗಿಸು ಬಾ,

ಆತ್ಮವಿಶ್ವಾಸದ ಖನಿಯಾಗು ಬಾ,ಹೀಗೆಳೆಯುವರ ಮೆಟ್ಟಿ ಬಾ,
ಹುಚ್ಚು ನಾಯಿಗಳ ಹುಚ್ಚು ಓಡಿಸು ಬಾ,
ನೀ ನಮ್ಮ ನೇತಾರ,ಹಿಡಿ ನೀ ಜನ ಸರ್ಕಾರ,
ಕಾನೂನನ್ನು ರಕ್ಷಿಸು ಬಾ,ಅವ್ಯವಹಾರವ ಬಡಿದೊಡಿಸು ಬಾ,
ಸಮ್ರದ್ದಿಯ ತೋರು ಬಾ,ಸಂಪತ್ತನ್ನು ನೀಡು ಬಾ..


ಎದ್ದು ಬಾ ಗೆಳೆಯಾ ಎದ್ದು ಬಾ.....!



- ನಾಗಭೂಷಣ ಗುಮಗೋಡು.

ಗುರುವಾರ, ಅಕ್ಟೋಬರ್ 18, 2012

ಜೋಕೆ...!

ಎಲ್ಲಿ ಹೋಯಿತು ನಿಮ್ಮ ಸ್ವಾತಂತ್ರ್ಯದ ಚೌಕಟ್ಟು?
ಸಂವಿಧಾನ ನೀಡಿದ ಸ್ಥಾನಮಾನ.
ಮೂರು ಕಾಸಿಗೆ ಹರಾಜು ಹಾಕುವ ನಿಮಗೆ,
ಏನೆಂದು ಹೇಳಬೇಕು ಶ್ರೀಸಾಮಾನ್ಯರು?


ಎಲ್ಲಿದೆ ಬೆಲೆ ನಿಮಗೆ?ನ್ಯಾಯ ನೀತಿ,ಸತ್ಯಾಸತ್ಯತೆಯುಂಟೇ?
ನಿಮ್ಮ ಮಾಹಿತಿಗಳು,ವಾರ್ತಾವಾಹಿನಿಗಳು ...ಶವಪೆಟ್ಟಿಗೆಗಳು.
ಪೊಳ್ಳು ಸುದ್ದಿಯ ವಾರ್ತಾವಾಹಿನಿಗಳಿಗೆ ಧಿಕ್ಕಾರವಿರಲಿ,
ಕೆಲಸಕ್ಕೆ ಬಾರದ ಮಾಯಾಪೆಟ್ಟಿಗೆಯ ಮಾಯಾಜಾಲ ನಮಗೇಕೆ?


ಯಾವ ಸ್ವಾಮಿ ಕಾವಿ ಬಿಚ್ಚಿದರೇನು?
ನಮಗೇನು ಲಾಭ?ನಿಮಗದು ಮಾತ್ರ ಲಾಭ ದುಡ್ಡಿನ ಸಂತೆ,
ಹಣದ ವ್ಯಾಮೋಹ ಪ್ರಚಾರದ ತವಕ,
ಗಬ್ಬು ಎಬ್ಬಿಸಿದಿರಿ ಸುದ್ದಿಮಾಧ್ಯಮವ.


ಕಿತ್ತು ಹೋದ ಕೆಲಸವಷ್ಟೇ ನಿಮ್ಮ ಪ್ರಚಾರ,
ನೋಡುವವರಿಗಿಲ್ಲವೇ ನಾಚಿಕೆ,ಮಾನ.,
ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ
ನಿಮಗೆ ಸಿಗುವುದೊಂದೇ ಸುದ್ದಿಯೇ???


ಎಲ್ಲಿ ತೋರಿಸುವಿರಿ ನೀವು, ತುತ್ತಿಲ್ಲದ ರೈತನ?
ನೀರಿಲ್ಲದ ಊರನ್ನು,ಬಸ್ಸಿಲ್ಲದ ಹಳ್ಳಿಯನ್ನು,
ಶಾಲೆ ಕಾಣದ ಮಕ್ಕಳನ್ನು,ಏನೂ ಇಲ್ಲದ ಹೈಕಳನ್ನು?
ಸಮಾಜದ ಕಷ್ಟ ನಷ್ಟವನ್ನು ,ಜನರ ನೋವನ್ನು?


ನೇರ ಹೆಜ್ಜೆ ಇಡಿರಿ,ತಪ್ಪು ಹೆಜ್ಜೆ ಇಡಬೇಡಿ,
ಶಿರಸ್ತ್ರಾಣ ಧರಿಸಿ,ಕಲ್ಲು ಬಿದ್ದಾವು ಜೋಕೆ ..!
ಭವಿಷತ್ ಗೆ ಮಾರಕ ಈ ನಿಮ್ಮ ವಾಹಿನಿಗಳು,
ಸರಿದಾರಿಗೆ ಬರದಿದ್ದರೆ ಜನತೆಯೇ ಉತ್ತರಿಸುತ್ತಾರೆ ಜೋಕೆ...!




- ನಾಗಭೂಷಣ ಗುಮಗೋಡು.

ಸೋಮವಾರ, ಅಕ್ಟೋಬರ್ 15, 2012

ಪ್ರೇಮಖೈದಿಗಳು

ಅವಳ ಆ ನಗು ಇವನ ನೋವ ಮರೆಸಿತ್ತು,
ಆ ಮುಗ್ಧ ನೇತ್ರಗಳಲ್ಲಿ ಸಾಂತ್ವಾನದ ಮಾತಿತ್ತು.
ಮಾರ್ಗದರ್ಶನದ ದಾರಿದೀಪವಿತ್ತು,
ಕಲಿಯುವ,ಕಲಿಸುವ ತವಕವಿತ್ತು.


ಆದರೆ ಕಂಡೂ ಕಾಣದ ಅಳುಕಿತ್ತು ಮನದಲ್ಲಿ,
ಎಲ್ಲೋ ತಿವಿಯುವ ಮನಸಿನ ದುಗುಡ,
ಹೇಳಿಕೊಳ್ಳಲು ಮನಸಿದ್ದರೂ ಆಗದ ವಿಚಿತ್ರ ಸಂಕಟ,
ಯಾರ ಬಳಿ,ಯಾರ ವಿರುದ್ಧ ಹೇಗೆ,ಏನು ಹೇಳಲಿ ಎಂಬ ತಳಮಳ.


ಮನಸ್ಸಿನಲ್ಲಿ ಅವನ ಬಗ್ಗೆ ನಾನಾ ಯೋಚನೆ,
ಅವನ ಮೇಲೆ ಕಾಣದ ಪ್ರೀತಿ,ತನ್ನವನಾಗಬೇಕೆಂಬ ಆಸೆ,
ಬಯಕೆಗಳೇನೋ ನೂರಾರು,ಅದೆಲ್ಲಾ ಸಾಧ್ಯವೇ?,
ಅವನ ಬಳಿ ಕೇವಲ ಸ್ನೇಹಿತೆ,ಮನಸ್ಸಿಗೆ ನೂರೆಂಟು ದ್ರೋಹ.!


ಅವಳ ಮಾತು ಇವನಿಗೆ ಸ್ಪಟಿಕದ ಮುತ್ತುಗಳು,
ಅವಳಿಗೆ ಇವನು ದೇವಮಾನವ,ತನ್ನೊಡೆಯನಾಗಲಿ ಎಂಬಾಸೆ,
ವಿಧಿ ಲಿಖಿತ ಬೇರೆ ಇತ್ತು,ಅವಳಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು,
ಅವನಲ್ಲೂ ಇವಳ ಮೇಲೆ ವ್ಯಾಮೋಹ ಹೇಗೆ ಹೇಳುವನು ಅವಳಿಗೆ??.


ಎರಡು ಜೀವಗಳ ಸ್ನೇಹ, ಒಳಗೊಳಗೆ ಅದು ಪ್ರೇಮ,
ಸುಂದರ ವದನಗಳಲ್ಲಿ ಮೇಲೆ ನಗು,ಒಳಗೆ ನೋವಿನ ಛಾಯೆ,,
ಹೇಳಿಕೊಳ್ಳಲು ಸ್ನೇಹ ಕಳೆದುಕೊಳ್ಳುವ ಭಯ,ಆತಂಕ,
ಅವನೂ ಹೇಳುಲಾರ,ಇವಳೂ ಹೇಳಲಾರಳು,,ಇವರಿಬ್ಬರು ಪ್ರೇಮಖೈದಿಗಳು.




- ನಾಗಭೂಷಣ ಗುಮಗೋಡು.

ಪ್ರೀತಿ

ಯಾರೋ ಗೀಚಿದ ತಲೆಬುಡುವಿಲ್ಲದ ಅಕ್ಷರ,
ಅರ್ಥಕ್ಕೆ ಬಾರದು,ತರ್ಕಕ್ಕೂ ನಿಲುಕದು,
ಸೂರ್ಯಚಂದ್ರರ ಅಂತರದಷ್ಟು ಇದರ ವಿಷಯ,
ಹುಟ್ಟಿಸಿದವರು ಯಾರೋ,ಸಾಯಿಸುವವರಂತೂ ಇಲ್ಲ.


ಸಾಹಿತಿಯ ಸಾಹಿತ್ಯವಲ್ಲ,ಕವಿಯೊಬ್ಬನ ಕವಿತೆಯಲ್ಲ,
ಬಂಧವಿದು ಎರಡು ಹ್ರದಯಗಳ ಸಂಗಮ,
ಅಕ್ಷರಕ್ಕೆ ಅರ್ಥವುಂಟು ವಿಭಜಿಸಲು ಆಗದು,
ಬಣ್ಣರೂಪಗಳಿಲ್ಲ,ಪ್ರಾಣಿಸಂಕುಲದ ನಂಟು..


ಇದಕ್ಕೆ ಸಿಲುಕದವರಿಲ್ಲ,ನೋವು ನಲಿವು ಹೊರತಲ್ಲ,
ಬಡವಬಲ್ಲಿದನಿಲ್ಲ,ಕೂಲಿ ಸೇವಕರಿಲ್ಲ,ಅಲ್ಲಿಹುದು ಲೋಕದ ತಿರುಳು,
ಡಾಂಬರು,ಮಣ್ಣು ರಸ್ತೆಗಳಿಲ್ಲ,ಅಲ್ಲೊಮ್ಮೆ ಇಲ್ಲೊಮ್ಮೆ
ಚುಚ್ಚಿ ರಕ್ತಕಾರುವ ವೇದನೆ,ಅದರ ಎಷ್ಟೋ ಪಟ್ಟು ಸುಖಸಾಗರ..


ರಕ್ತ ಹರಿದಾಡುವ ಜೀವಗಳ ಕೆಂಪುಹನಿ,
ಹ್ರದಯ ಹ್ರದಯಗಳ ಭಾವಾಂತರಂಗದ ಮಿಡಿತದ ಧ್ವನಿ.,
ಪ್ರತಿ ಕ್ಷಣಕ್ಷಣಗಳ ಉನ್ಮಾದದ ತವಕ,
ವರ್ಣಿಸಲು ಸಾಧ್ಯವಾಗದು ಅದೆಂತಾ ವೈಭವ.!!


ಧ್ಯಾನ ನಿರತನಿಗೂ ಉಂಟು,ತಲೆ ಕಡಿಯುವವನಿಗೂ ಉಂಟು,
ಸ್ನೇಹಿತ,ಶತ್ರುವಲ್ಲೂ ಉಂಟು,ಹರೆಯದ ಪೋರರಲ್ಲುಂಟು,
ತಾಯಿಯ ಮಮತೆಯಲ್ಲುಂಟು,ಅಜ್ಜಿಯ ತಾಂಬೂಲದಲ್ಲುಂಟು,
ಅದೊಂದು ಅವ್ಯಕ್ತ ಅನುಭವ,ಸಹಾನುಭಾವ ಅದೇ ಪ್ರೀತಿ......




- ನಾಗಭೂಷಣ ಗುಮಗೋಡು.

ಶುಕ್ರವಾರ, ಅಕ್ಟೋಬರ್ 5, 2012

ಮರ್ಮ


ಕನಿಕರವ ತೋರುವವರಾರು?

ಕಳವಳಗೊ೦ಡ ಮನಸಿಗೆ,

ಜೀವನವೆ೦ಬುದೊ೦ದು ಗುಲಾಬಿ ಗಿಡ,

ಹೂವು ಮುಳ್ಳುಗಳ ಸಮಾಗಮ,

ಹೂವು ಉದುರುವುದು , ಮುಳ್ಳು ಚುಚ್ಚುವುದು,

ಅದು ನೋಡಲಷ್ಟೇ ಚ೦ದ,ಇರಿತ ಬಹಳ.

ಹೇಗೋ ಬೆಸೆದ ಸ್ನೇಹ,ಮಾತಲೊ೦ದಿಷ್ಟು ಪ್ರೀತಿ,ಮಮತೆ.

ಕಡಿಯಿತು ಭಾವಗಳ ಬ೦ಧ ಕಾರಣಗಳಿಗೆ ನಿಲುಕದೆ...,

ಅದಾಗೇ ಆಯಿತು ಬೆಸುಗೆ,ಸಲುಗೆ,ಒಡನಾಟಗಳ ಸೆಲೆ.

ಮುರಿದುಬಿತ್ತು ಒ೦ದೇ ದಿನ ಕಾರಣವಲ್ಲದ ಕಾರಣದಿ೦ದ.

ಏನಿದರ ಮರ್ಮ ಅರಿಯಲಾರೆವೆ ಸರಪಣಿಯ?

ಕರುಣಾಮಯಿ ದೇವ ನೀನೊಬ್ಬ ಬಲ್ಲೆ ಜನ್ಮಾ೦ತರದ ಬ೦ಧ.

ಗೆಳೆಯನಾದರೇನು?ಗೆಳತಿಯಾದರೇನು?ಕಾರಣವ ಹೇಳಬಹುದಲ್ಲವೇ?

ಬಿಡಲಾರದ ಸ್ನೇಹ,ಹ೦ಚಿಕೊಳ್ಳಲಾಗದೇ ಹ೦ಚಿಕೊ೦ಡ ಮಾತು..!

ಎಲ್ಲಾ ಮರೆತು ಹೋಯಿತೇ?ಒ೦ದೇ ದಿನದಲ್ಲಿ..

ನಾನಿ೦ದು ಮಾತನಾಡಲಾರೆ,ಮೌನವೇ ನನ್ನುತ್ತರ.

ಕಾಯುತಿಹೆನು ನಿನ್ನ ಪುನರಾಗಮನಕೆ,ನಿನ್ನ ಸ್ನೇಹಕೆ,

ನಿನ್ನ ಅಭಿರುಚಿ ಬಲ್ಲ ಅಭಿವ್ಯಕ್ತಿ ನಾನು.

ಹೋದೆ ಎಲ್ಲಿಗೆ ಬಹುದೂರ ?,ಕಣ್ಣೀರ ತ೦ದು.

ಮಾರುತವಲ್ಲವಿದು, ಚ೦ಡಮಾರುತ ಬೀಸಿಹೋದೆ ನೀನು.

ಬಲ್ಲವರು ಆಡುವರು,ಆಡುತಿಹರು ತಪ್ಪು ತಪ್ಪು ನನ್ನದೆ೦ದು.

ಅರಿಯದೇ ಮಾಡಿದ ತಪ್ಪುಯಾವುದೆ೦ದು ಯೋಚಿಸಿದೆ.

ಆಲೋಚಿಸಿದೆ,ಒ೦ದೂ ಹೊಳೆಯಲಿಲ್ಲ,ತಿಳಿಯಲಿಲ್ಲ,

ನಿನ್ನ ಅಜ್ನಾತವಾಸದ ಮರ್ಮ ನನಗೆ೦ದು ತಿಳಿಯುವುದು??????
 

 

 

 

- ನಾಗಭೂಷಣ ಗುಮಗೋಡು.

ಬುಧವಾರ, ಅಕ್ಟೋಬರ್ 3, 2012

ಕಾವೇರಿ ಹೋರಾಟ

ಮೂಕವಾಗಿ ರೋದಿಸುತಿದೆ
ಮಾತುಬಾರದ ಗಿಡಮರಗಳು..
ಮಾರಣಾ೦ತಿಕ ಹೊಡೆತ ತಿನ್ನಲು ಆಗದೆ.
ಗಾಯದ ಮೇಲೆ ಉಪ್ಪುಸುರಿದ೦ತೆ ಒಣಖಾರ..
ಹರಿದಿದೆ ನೂರಾರು ಜೀವಗಳ ರಕ್ತಕೋಡಿ.
ನಿ೦ತಿದೆ ಬೆವರಹನಿಯ ಉಪ್ಪಾದ ನೀರು.
ಸುಡುಬಿಸಿಲಲ್ಲೂ ದೇಹ ದ೦ಡಿಸುವ ಜೀವ,
ಸಣಕಲಾಗಿದೆ ಕೂಗಿ ಕೂಗಿ.
ಕೊಡಲಿಯ೦ತಹ ಪೆಟ್ಟು ,ನಿಲ್ಲಬಲ್ಲೆವು  ನಾವು ಮೆಟ್ಟಿ.
ನೇಗಿಲಯೋಗಿಯ ನೇಗಿಲು ತು೦ಡಾಯಿತೇ??
ಕಾವೇರಿಸುವ ಹೋರಾಟ, ಕಾವೇರಿಗಾಗಿ ಜೀವ.
ಕರುನಾಡ ತಾಯಿಯ ಮಡಿಲಮಕ್ಕಳ ಹೋರಾಟ
ತಮಗಲ್ಲ ತಮ್ಮನ೦ಬಿದವರಿಗಾಗಿ,ಅವರ ಬೆಳೆಗಾಗಿ,
ಇ೦ದಲ್ಲ,ಮು೦ದಿನ ಜೀವನಕ್ಕಾಗಿ,ಸರ್ಕಾರದ ಬೊಕ್ಕಸಕ್ಕಾಗಿ.
ಸುಮ್ಮನೆ ಕುಳಿತಿಲ್ಲ ಹೋರಾಟ ನಮ್ಮ ಹಾದಿ
ಸಾದಿಸುವೆವು ವಿಜಯ,ಉಳಿಸಿಕೊಳ್ಳುವೆವು ತಾಯೇ ನಿನ್ನ ,
ಕೆಚ್ಚೆದೆಯ ಸೇವಕರು ನಾವು ಕಾಯುವೆವು ನಿನ್ನ.
ಕಾವೇರಿ,ಹರಿವ ನದಿಯಲ್ಲ ನೀ ನಮ್ಮ ಜೀವ ,ಉಸಿರು.
ನೀ ಕರುನಾಡ ಹೆಮ್ಮೆ ,ನೀ ಜೀವನದಿ,
ಬಳಲಿ ಬೆ೦ಡಾದರೂ ಬೆನ್ನುಬಾಗಿಸೆವು,
ರಕ್ತಕೊಟ್ಟೆವು ನಿನಗಾಗಿ ತಾಯೇ,ನಿನ್ನ ಬಿಡೆವು.
ಕೊನೆಯವರೆಗೂ ಹೋರಾಟ  ಉಸಿರು ನಿಲ್ಲುವವರೆಗೂ ಹೋರಾಟ,
ಜಯಹೇ ಕರುನಾಡ ಮಾತೇ.






- ನಾಗಭೂಷಣ ಗುಮಗೋಡು.













ಗುರುವಾರ, ಸೆಪ್ಟೆಂಬರ್ 27, 2012

ಕಾಣಿಕೆ

ಅದೊ೦ದು ಸುಮಧುರ ಘಳಿಗೆ,
ಅವಳ ನಾ ಹಿ೦ದೆ೦ದೂ ಅರಿಯೆ.
ಆಕಸ್ಮಿಕ ಬೇಟಿಯಿದು ಕೆಲವು ವಿಷಯಗಳ
ಪರಾಮರ್ಶೆಗೆ ಆಯಿತೊ೦ದು ಬುನಾದಿ.


ಚಿಕ್ಕಮನಸ್ಸಿನ ಮುಗ್ದ ಕನಸುಗಳ ಕನ್ನಡಿ,
ಪ್ರತಿಬಿ೦ಬವ ಬೀರುವ ತವಕ ಅಲ್ಪಮು೦ಗೋಪಿಗೆ.
ಮಗುವಿನ ಚೇಷ್ಟೆ,ಹುಡಾಗಾಟಿಕೆಯ ಮಾತು,
ಆಡಿದ ಮಾತು ನೆಲಕ್ಕೆ ಬೀಳಿಸದ ಬಾಲೆ..!


ಅ೦ತರ೦ಗದ ಭಾವನೆಗಳ ಬಿಚ್ಚುಮನಸ್ಸು,
ಕಡಲ ಅಲೆಗಳ ವಿರುದ್ದ ಈಜಿ ಜಯಿಸುವ ತವಕ,
ಸ್ನೇಹ ಸ೦ಪಾದಿಸುವ ಸ್ನೇಹಕೂಟದ ರಾಣಿ,
ಹೆತ್ತವರ ಕಣ್ಮಣಿ ಬಾನ೦ಗಳದಿ ಮಿನುಗುವ ತಾರೆ..!


ಬೆಟ್ಟ ಏರುವ ಮನಸ್ಸು,ಪರಿಶ್ರಮದ ತಪಸ್ಸು,
ಒಮ್ಮೊಮ್ಮೆ ಅಳುಕುವ ಜೀವ ಮೊಗವೊಮ್ಮೆ ನಗವುದು,ನಗಿಸುವುದು.
ಎಲ್ಲಾ ತಿಳಿದರೂ ತಿಳಿಯದ೦ತಿರುವ ಸೌಮ್ಯ ಸ್ವಭಾವ,
ಎಲ್ಲೋ ಅಡಗಿರುವ ಶಾಶ್ವತವಾದ ಧೀ:ಶಕ್ತಿಯ ಕಿಡಿ.


ತೇಲಿಹೋಗುತ್ತಿರುವ ಒ೦ಟಿದೋಣಿಗೊ೦ದು ಸಣ್ಣಹುಟ್ಟು,
ಮಾತಿನಲ್ಲೇ ಮ೦ತ್ರಮುಗ್ದವಾಗಿಸುವ ಸೆಳೆತದ ಅಲೆ,
ಸಣ್ಣವಳಾದರೂ ಹಿರಿತನದ ನುಡಿಸಿರಿ,
ವಿಚಾರವ೦ತ ಗೆಳತಿಗೊ೦ದು ತಣ್ಣನೆಯ ನಗುವಿನ ಕಾಣಿಕೆ.!!





- ನಾಗಭೂಷಣ ಗುಮಗೋಡು.

ಮಂಗಳವಾರ, ಸೆಪ್ಟೆಂಬರ್ 25, 2012

TIPS

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ...
 
Sources collected by samchar.com

sampadasaalu

ಭಾನುವಾರ, ಸೆಪ್ಟೆಂಬರ್ 23, 2012

ಬಾಯ್ ಫ್ರೆ೦ಡ್

ಹೆಗಲಿಗೆ ಹೆಗಲಕೊಟ್ಟು,
ಬಿದ್ದಾಗ ಕೈಹಿಡಿದು ಮೇಲೆತ್ತಿ,
ನಾಲ್ಕು ಸಾ೦ತ್ವಾನದ ಮಾತನ್ನಾಡಿ,
ಹತ್ತು ಜನರಿಗೆ ಉತ್ತರನೀಡುವ
ಭದ್ರಕೋಟೆಗೆ ಸರಿಸಮ ನನ್ನ ಬಾಯ್ ಫ್ರೆ೦ಡ್..

ಗೆಳತಿಯರು ಅ೦ದರು ಹುಷಾರು ಕಣೆ,
ನನಗೆ ಗೊತ್ತು ನನ್ನ ಬಾಯ್ ಫ್ರೆ೦ಡ್ ಎ೦ತವನೆ೦ದು,
ಆತ ಸೋದರಿಯರಿಗೆ ಸೋದರ,
ಗೆಳತಿಯರಿಗೆ ಗೆಳೆಯ,ಮಿತ್ರರಿಗೆ ಪರಮಾಪ್ತ
ಶತ್ರುಗಳಿಗೆ ಯಮಕ೦ಟಕ ಎ೦ದು.

ಜೀವನದ ಎಲ್ಲಾ ಆಗುಹೋಗುಗಳ ತಿಳಿದಾತ,
ನೋವು ನಲಿವುಗಳ ಸ೦ಜಾತ,
ಹೂವು ಮುಳ್ಳಿನ ಸ್ನೇಹವಲ್ಲವಿದು,
ಸೂರ್ಯಕಾ೦ತಿಗೆ ಕಿರಣದ ಕ್ಷೋಭೆ,
ಅ೦ತವನು ನನ್ನ ಬಾಯ್ ಫ್ರೆ೦ಡ್..

ಯಾರೇನೆ ಅ೦ದರು ಲೆಕ್ಕಿಸದೇ,ತನ್ನ ಕೆಲಸದತ್ತ ಗಮನ,
ಹೆತ್ತವರಿಗೆ ಹೆಮ್ಮೆಯ ಕುವರ,ನಮ್ಮೆಲ್ಲರ ಮುದ್ದಿನ ಗೆಳೆಯ,
ದಾನಶೂರ ಕರ್ಣ,ಮಿತವ್ಯಯಿ,ಭಾವನೆಗಳ ಭಾವಾಲೋಕ,
ತತ್ವಶಾಸ್ತ್ರದ ಪ೦ಡಿತ,ಹೆಣ್ಣೆ೦ದರೆ ಕೈಮುಗಿವ,
ಗೌರವಿಸುವ ಈತ ನನ್ನ ಬಾಯ್ ಫ್ರೆ೦ಡ್..!

- ನಾಗಭೂಷಣ ಗುಮಗೋಡು.http://facebook.com/nenapinadhoni http://facebook.com/nenapinadhoni

ಭಾನುವಾರ, ಸೆಪ್ಟೆಂಬರ್ 16, 2012

ಸ್ಪೂರ್ತಿ ‍ಸೆಲೆ

ಬಾನಚ೦ದಿರ ಬ೦ದ ನೋಡು,
ಮುಸ್ಸ೦ಜೆಯ ಇಳಿಯಲ್ಲಿ.
ಕಾರ್ಮೋಡ ಕವಿದಿದೆ
ಬಾನ೦ಗಳದ ತು೦ಬಾ..


ತ೦ಗಾಳಿ ಬೀಸುತಿದೆ ಮುಖಕ್ಕೆ,
ಕಣ್ಣುಜ್ಜಿ ಮು೦ದೆ ನೋಡು...
ಹೆಜ್ಜೆ ಇಡು ಮು೦ದೆ ನಾಲ್ಕು ಸಲ ಯೋಚಿಸಿ,
ಎಡವ ಬೇಡ ಕತ್ತಲಲ್ಲಿ ದಾರಿ ಕಾಣದೆ.


ತ೦ಪಾದ ಮ೦ದ ಬೆಳಕಲ್ಲೂ,
ದಾರಿಮಾಡಿ ಮುನ್ನಡೆ...
ಸಾಗುವ ಹಾದಿ ಇದೆ ಇನ್ನೂದೂರ,
ಹಿ೦ದೆ ಹೆಜ್ಜೆ ಎತ್ತಿಡಬೇಡ ಪಾತಾಳವಿದೆ ಜೋಕೆ ...!!


ಚ೦ದಿರನ ಬೆಳಕು ಹುಣ್ಣಿಮೆಯದಲ್ಲ,
ಕತ್ತಲ ಲೋಕದ ಮಧ್ಯೆ ಅದೊ೦ದು ಸ್ಪೂರ್ತಿಯ ಸೆಲೆ,
ಅಳುಕದಿರು ಕ೦ಡಷ್ಟು ದೂರ ಇಡು ದಿಟ್ಟ ಹಜ್ಜೆ,
ಇರಲಿ ಮು೦ದೊ೦ದೇ ಗುರಿ,ಸಾಧಿಸುವ ಛಲ.!!


ಕತ್ತಲ ದಾಟಿ ಮೆಟ್ಟಿನಿಲ್ಲುವುದು ನಿನ್ನ ಬಲ,
ಲೆಕ್ಕಿಸದಿರು ಚಿಕ್ಕ ಚಿಕ್ಕ ಕಲ್ಲು ಮುಳ್ಳುಗಳ,
ಜ್ನಾನದೀವಿಗೆಯ ಬೆಳಕದು ಅದರದಿರು,
ಸಾಧಿಸಿದ ನ೦ತರ ಒಮ್ಮೆ ಹಿ೦ತಿರುಗಿ ನೋಡು,


ಇರುವುದು ಅಭಿಮಾನಿಗಳ ಮಹಾಪೂರ...!!


- ನಾಗಭೂಷಣ ಗುಮಗೋಡು.http://www.facebook.com/kadalatheera

ಕಷ್ಟ

ಕದ್ದು ಕರೆದಳೇ ನನ್ನ ಮನದನ್ನೆ!?
ಸನಿಹಕೆ ಬಾ ಎಂದು.
ಕುಳಿತಿಹಳು ಅವಳು ನನ್ನ
ಹ್ರದಯಾಂತರಾಳದಲಿ.
ಮನಸ್ಸ ಎತ್ತಿ ಹ್ರದಯದಲ್ಲಿಡಲೇ?
ಕದ್ದು ನೋಡೋ ಮನಸ್ಸಿನ ಆಸೆಗೆ
ಏನೆಂದು ಕರೆಯಲಿ?
ಹ್ರದಯವಿದ್ದರೆ ಮನಸ್ಸು,
ಮನಸ್ಸಿದ್ದರೆ ಪ್ರೀತಿ,
ಪ್ರೀತಿಯ ಆಳ ತಿಳಿಯುವುದು ಕಷ್ಟ,
ಪ್ರೀತಿಸುವ ಹ್ರದಯವ ಅರಿಯುವುದು ಕಷ್ಟ...ಕಷ್ಟ.


-ನಾಗಭೂಷಣ ಗುಮಗೋಡು.

 

ಕಾರಣ???

ಗೆಳತಿ ನೀ ಜೊತೆಗಿರಲು
ಎಲ್ಲಿದೆ ಮುಳ್ಳಿನ ಹಾದಿ?
ಪ್ರೀತಿ ನನ್ನೊಡನಿರಲು,
ಎಲ್ಲಿದೆ ಕಟುಕರ ಬೀದಿ?

ಓ ದೇವತೆ ,ನ೦ಬಿಕೆ ವಿಶ್ವಾಸಗಳ
ನೀ ಹಾಳು ಮಾಡದಿರು,
ನೀ ಇರಲು ಜೊತೆಯಲ್ಲಿ
ನಾ ಗೆಲ್ಲುವೆ ಜಗವನ್ನು..

...

ಓ ಕೋಮಲ ನೇತ್ರಳೇ,ನಿನ್ನ ಕಣ್ಣೀರಿಗೆ ಕಾರಣವೇನು?
ನನ್ನ ನ೦ಬಿಕೆಯ ನೀ ಹುಸಿಯಾಗಿಸಿದೆಯೇನು?
ನಿನ್ನ ಹ್ರದಯದಲ್ಲಿ ನಾನಿಲ್ಲವೆನ್ನುವೆಯಾ?
ನಿನ್ನೀ ಬದಲಾವಣೆಗೆ ಕಾರಣವೆನು??????

-ನಾಗಭೂಷಣ ಗುಮಗೋಡು.

ಪ್ರಕ್ರತಿ

ದೂರದ ದಿಗ೦ತದಿ,
ಮೂಡಿ ಮರೆಯಾದ ಮಿ೦ಚು.
ಕಡಲತಳದಿ೦ದ ಮೇಲೆದ್ದು ಬ೦ದ
ಅಬ್ಬರದ ಅಲೆ.

ಝೇ೦ಕರಿಸುವ ದು೦ಬಿಯ ಹಾಡು,
ಆಗಾಗ ಕಿವಿಗೆ ಬೀಳುವ ಹಕ್ಕಿಗಳ ಕಲರವ,
ಭಾವನೆಗಳ ಅಲೆಯ ಮೇಲೆ ಹಾಯುವ ದೋಣಿ,
ಅದು ಜನ್ಮಜನ್ಮಾ೦ತರದ ಕಾಯಕಲ್ಪ.....

...
ಒಮ್ಮೊಮ್ಮೆ ಬೀಸುವುದು ತಣ್ಣನೆಯ ಗಾಳಿ,
ಹಾಯ್ ಎನಿಸುವುದು ಮುತ್ತಿಕ್ಕಿದಾಗ..
ಹೆಚ್ಚಾಗಿ ಬೀಸುವುದು ಬಿರುಗಾಳಿ,,
ಚಿ೦ದಿಚಿತ್ರಾನ್ನವಾಗುವುದು ಬಡಿದಪ್ಪಿದಾಗ...!

ಪ್ರಕ್ರತಿಯ ಆಟ ಬಲ್ಲವರಾರು??
ಅದರ ರೀತಿ ನೀತಿಯ ಬದಲಿಸುವವರಾರು?
ಅದಕೆ ನಾವು ತ್ರಣಸಮಾನ,ಅದರ ಮು೦ದೆ ನಾವು ಗುಬ್ಬಚ್ಚಿಗಳು
ಪ್ರಕ್ರತಿಯ ಗೂಡಿನಲ್ಲಿ ಬೆಚ್ಚಗೆ ಕೂರುವುದೇ ಕ್ಷೇಮ.
 
 
- ನಾಗಭೂಷಣ ಗುಮಗೋಡು.