ಗುರುವಾರ, ಫೆಬ್ರವರಿ 21, 2013

ಮನಸೇ ಸಮಾಧಾನ

ತೆರೆದಿಟ್ಟ ಮನವೇ ಕೇಳು..
ನಲ್ಮೆಯ ಒಲವೇ ಕೇಳು..
ನಿನ್ನಯ ಮೌನವ ಮುರಿಯುವೆ ನಾ..
ನಿನ್ನ ತುಟಿಯಂಚಲಿ ತರಿಸುವೆ ನಾ ನಗುವ..

 
ಒಲವಿನ ಜೀವವೇ ಏನಾಯ್ತು..?
ತೆರೆಸಿಕೋ ನಿನ್ನ ಒಳ ಗಣ್ಣ..
ತೆರೆದು ನೋಡು ಕಾಣುವುದು ನಿನಗೆ ಜಗಬಣ್ಣ..
ನೀ ನುಡಿವ ಮಧುರ ಪಿಸುಮಾತಿಗೂ ಗೊತ್ತು ನಿನ್ನ ನೋವು.



ಚಲಿಸುವೆ ಏನೆಂದು?ನುಡಿಸುವೆ ಏನೆಂದು?
ನೀ ನುಡಿದರೇನು?ನುಡಿಯದಿದ್ದರೇನು?
ನಾ ಬಲ್ಲೆ ನಿನ್ನ ಅಂತರಾಳದ ಧ್ವನಿಯ..
ಎಲ್ಲೆಲ್ಲೂ ನಗುವೆ ನೀ ಅದರ ಹಿಂದಿಹುದು ದುಃಖದ ಭೋರ್ಗರೆತ.

 
ಯಾರಿಗೆ ಯಾರುಂಟು ಯಾರು ಬಲ್ಲವರು?
ತಮ್ಮ ಜಾಡಿಗೆ,ಜಿದ್ದಾಜಿದ್ದಿಗೆ ಹೆಗಲು ಕೊಡುವವರಾರು?
ಕಣ್ಣು ಹಾಯಿಸಿದಷ್ಟು ದೂರ ಕತ್ತಲೆ,ಕಾಣದು ದಾರಿ ಶೂನ್ಯ..
ಅರ್ಥವಿಲ್ಲದ ಯೋಚನೆಗೆ ಲಗಾಮು ಹಾಕಬಾರದೇಕೆ?


ಅರಿವೆ ಇಲ್ಲದಿಹುದು ಬಾಹ್ಯಲೋಕಕೋ??
ಅಂತರಂಗದ ಭಾವನೆಗೆ ದಿಕ್ಸೂಚಿಯ ಕೊರತೆಯೇ?
ಅದ್ಯಾವುದೋ ಮೂಲೆ ಹೇಳುವರಿಲ್ಲ,,ಕೇಳುವರಿಲ್ಲ.
ದಿಕ್ಕು ತಪ್ಪಿದ ಕುದುರೆಯಂತೆ ಮನಸಿನ ನಾಗಾಲೋಟ...

 
ನೋಡಲದುವೆ ಕಾರ್ಮೋಢ,ಅಂಚಲೊಂದು ಬೆಳ್ಳಿರೇಖೆ..
ನೋಡಲದು ಚಂದ ಅಂದ,ನಿನ್ಯಾಕೆ ಆಗಲೊಲ್ಲೆ ಅದರಂತೆ?
ಬಯಸಿದಷ್ಟು ಕೊಡುವೆ ನನ್ನ ಪ್ರೀತಿಯ,ವಾತ್ಸಲ್ಯದ ಬಲವ..
ಓ ನನ್ನ ಮನವೇ ನಿನ್ನ ಜೊತೆ ನಾನೆಂದು...ಮನಸೇ ಸಮಾಧಾನ..






-ನಾಗಭೂಷಣ ಗುಮಗೋಡು.