ಗುರುವಾರ, ಡಿಸೆಂಬರ್ 20, 2012

"ಛಲವೊಂದಿದ್ದರೆ ಮಾರ್ಗ"


"ಮಾಡಿದ್ದುಣ್ಣೋ ಮಹರಾಯ" ಎಂಬ ನಾಣ್ಣುಡಿಯನ್ನು ಎಲ್ಲರೂ ಕೇಳಿರುತ್ತಾರೆ.ಅಂದರೆ ನಾವು ಏನು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಪ್ರತಿಫಲ ಎಂಬರ್ಥ.ದುಡಿದು ಕೆಲಸ ಮಾಡು,ಬಗ್ಗಿ ಕೆಲಸಮಾಡು,ಜವಾಬ್ದಾರಿ ಹೊತ್ತು ಕೆಲಸ ಮಾಡು ಎಂದು ಜನ ಆಡುತ್ತಾರೆ.ಅದಕ್ಕೆ ತಕ್ಕಂತೆ ಸಂಬಳ,ಕೂಲಿ,ದೈನಂದಿನ ಅಗತ್ಯತೆಗೆ ಅನುಕೂಲಕರ ರೀತಿ ನಿರ್ಮಾಣವಾಗುವುದು ಸುಳ್ಳಲ್ಲ.ಆದರೆ ಈ ಕೆಲಸ ಮಾಡುವುದು ಹೇಗೆ?.ಒಂದು ಅಡಿಗೆ ಸಿದ್ದಪಡಿಸುವಾಗ ಮುಖ್ಯವಾಗಿ ಕಟ್ಟಿಗೆ,ಒಲೆ,ಉರಿ,ಪಾತ್ರೆ,ಅಡುಗೆಗೆ ಬೇಕಾದ ಸಾಮಾಗ್ರಿಗಳು ಅಗತ್ಯ.ನಂತರ ಅದನ್ನು ನಮಗೆ ಬೇಕಾದ ರೀತಿ ಅಡುಗೆ ಸಿದ್ದಪಡಿಸಿ ಸಂತ್ರಪ್ತಿಯಾಗಿ ಉಣ್ಣಬೇಕು.ಆಗಲೇ ಮನಸ್ಸಿಗೊಂದು ರೀತಿ ಸಂತಸ,ನೆಮ್ಮದಿ.

 

ಹಾಗೆಯೇ ಮಾನವನ ಜೀವಿತದ ಪ್ರತಿಯೊಂದು,ಘಳಿಗೆಯಲ್ಲೂ ಕಟ್ಟಿಗೆ,ಒಲೆ,ಪಾತ್ರೆ,ಉರಿ ಇರಲೇಬೇಕು.ಮಾನವನ ಜೀವನ ಒಂದು ಅಡುಗೆ ಪದಾರ್ಥದಂತೆ.ಅದು ಚೆನ್ನಾಗಿ ಬೆಂದಾಗಲೇ ಅಡುಗೆ ರುಚಿಯಿರುವುದು.ಅಂದರೆ ಜೀವನ ಸಾರ್ಥಕವಾಗುವುದು.ಏನು ಮಾಡಿದರೆ ಏನು ಸಿಗುವುದು? ಎಂಬ ನಿಚ್ಚಳ ಹುಡುಕಾಟದ ಬದುಕೇ ಸಾಧನೆಯತ್ತ ಅನವರತ ಪಯಣ.

 

ಸಾಧನೆಯ ಹಾದಿ ತುಳಿಯುವಾಗ,ಮೊದಲು ಕಷ್ಟ ಮತ್ತು ನೋವುಗಳೆಂಬ ಕಲ್ಲು ಮುಳ್ಳುಗಳ ಮೇಲೆ ನಡೆಯಬೇಕು.ಜೀವನ ಚಕ್ರದ ಗಾಲಿ ಮೊದಮೊದಲು ಕಲ್ಲುಮುಳ್ಳುಗಳ ದಾಳಿಗೆ ಸಿಕ್ಕಿ ಹೊಯ್ದಾಡುವುದು.ಕಟ್ಟಿದ ಕನಸು ಬೀಳುವುದೋ?ಎಂದೆನಿಸುವುದು ಇದು ಮಾನವನ ಅಂತಃಕರಣದ ಆತಂಕ ಎಂದರೆ ತಪ್ಪಿಲ್ಲ.ಆದರೆ ಕಲ್ಲುಮುಳ್ಳಿನ ಹಾದಿಯ ನಂತರ,ಮಣ್ಣಿನ ರಸ್ತೆ ಬರುವುದು,ಅದಾದ ನಂತರ ಡಾಂಬರು ರಸ್ತೆ  ಕೊನೆಗೆ ಕಾಂಕ್ರೀಟ್ ರಸ್ತೆಯೂ ಬರುವುದು.ಕಾಂಕ್ರೀಟ್ ರಸ್ತೆ ಬಂತೆಂದರೆ ಸಿದ್ದಪಡಿಸಿದ ಅಡುಗೆ ಸವಿಯಲು ಸಿದ್ದ ಎಂದು ಭಾವಿಸಬಹುದು.ನಂತರ ಅದನ್ನು ಸೇವಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ.ಅಂದರೆ ನಮ್ಮ ಜೀವನದ ಸಾಧನೆಯೊಂದಿಗಿನ ಪಯಣ ,ಧ್ರಢ ವಿಶ್ವಾಸ,ಛಲ,ನಂಬಿಕೆಯೊಂದಿಗೆ ಸಾಗಿ ಯಶಸ್ಸಿನ ಗುರಿ ತಲುಪಿತು ಎಂದು ತಿಳಿಯಬಹುದು.

 

ನಮ್ಮ ಸುತ್ತಮುತ್ತಲು ನಾನಾ ಬಗೆಯ ಜೀವನ ಶೈಲಿಯ ಜನರಿದ್ದಾರೆ.ಒಬ್ಬೊಬ್ಬರದು ಒಂದೊಂದು ಕಥೆ,ವ್ಯಥೆ.ಅವರಲ್ಲಿ ಕುಂಟರು,ಕಿವುಡರು,ಮೂಗರು,ಅನಾಥರು,ಭಿಕ್ಷುಕರು,ಗಂಜಿ ಕಾಣದವರು,ರಸ್ತೆಯಲ್ಲೇ ಓಡಾಡದವರು,ವಿಧವೆಯರು,ಸಾಲ ಮಾಡಿದವರು ಹೀಗೆ ನೋವು ನಲಿವುಗಳ ಜನತೆಯ ಪಟ್ಟಿ ಬೆಳೆಯುತ್ತದೆ.ಇಂತಹ ಸಮಾಜದ ನಡುವೆ,ಘಾತುಕ ಶಕ್ತಿಗಳ ವಿರುದ್ದ ಹೋರಾಡಿ ನಮ್ಮತನವನ್ನು ನಾವು ಕಂಡುಕೊಳ್ಳಬೇಕಿದೆ.ಇಂದಿನ ಜನ ದಡ್ಡರಲ್ಲ.ಆದರೆ ಅವರಲ್ಲಿ ದುಡಿಯುವ ಛಲವಿಲ್ಲ.ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯೂ ಉಂಟು.ನಮ್ಮಲ್ಲಿ ಕನಸು ಕಾಣುವವರಿಗೆ ಕೊರತೆಯಿಲ್ಲ,ಆಸೆಯೂ ಬಹಳಷ್ಟು.ಆದರೆ ಅದನ್ನು ಈಡೇರಿಸುವ ಕಲೆ ನಮ್ಮಲ್ಲಿ ಇನ್ನೂ ಬರಬೇಕಿದೆ.ಅದು ನಮ್ಮ ಅಂತಃಶಕ್ತಿಯಲ್ಲೇ ಇದೆ.

 

ನಮ್ಮ ಮನೋನಂದನದ ಕವಾಟ ತೆರೆದಾಗ ಅಲ್ಲಿ ಸಾಧಿಸುವ ನೂರಾರು ಹಾದಿಗಳು ಗೋಚರವಾಗುತ್ತದೆ.ದುಡಿಮೆ,ಹಣ ಇವುಗಳ ಜೊತೆ ಜೀವನ ಸಾಗುತ್ತದೆ.ಕಣ್ಣೀರಿನಲ್ಲೇ ಒದ್ದೆಯಾದ ದೇಹ, ಎಳನೀರ ಸ್ನಾನಕ್ಕೆ ಸಿದ್ದವಾಗುತ್ತದೆ.ಅದಕ್ಕೆ ಪರಿಶ್ರಮ ಅತ್ಯಗತ್ಯ.ನಾವು ಬೆಳೆದಂತೆ ಇನ್ನೊಬ್ಬರನ್ನು ಬೆಳೆಸಬೇಕು.ಆಗ ನಮ್ಮ ತಿಳುವಳಿಕೆಯ ಮಟ್ಟ ಏರುತ್ತಾ ಹೋಗುತ್ತದೆ.ಮಾನವನ ಜೀವನದ ವಿವಿಧ ಸ್ಥರಗಳು ಕೇವಲ ಸಾವು ,ಬದುಕಿನ ಕೊಂಡಿಯಲ್ಲ.ಅದು ಮಾನವನ ಹಿರಿಮೆಗೆ ಇರುವ ಕಾಲಾವಕಾಶಗಳು.ಚಿಕ್ಕ ಕೂಲಿಯವನಿಂದ ಹಿಡಿದು ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸಮಾಡುವವನಿಗೂ ಇರುವ ಅಗತ್ಯತೆ ಸಾಧನೆ ಮಾತ್ರ.ಅದು ಕುಳಿತು ಉಣ್ಣಲು ನೆರವಾಗುವುದು.

 

ಜೀವನದಲ್ಲಿ ಕೆಲವು ಅಚ್ಚರಿಯ ಮೈಲುಗಲ್ಲುಗಳುಂಟು,ಅದು ನಮ್ಮ ಜೀವನದಲ್ಲೇ ಯಾಕಾಗಬಾರದು?ಕೆಲವು ನಿಯಮಿತ ತಪಸ್ಸನ್ನಾಚರಿಸಿದರೆ ಅದು ನಮ್ಮನ್ನು ಅತಿಥಿಯೆಂದು ಭಾವಿಸಿ,ಅತಿಥಿ ದೇವೋಭವ ಎಂದು ನಮ್ಮ ಬಳಿ ಬರುವುದು.ಸಾಧನೆಗಿಂತ ಮಿಗಿಲಾದುದು ಯಾವುದೂ ಇಲ್ಲ.ಹಣ ಕೇವಲ ಕೀರ್ತಿ ,ಹಿರಿಮೆ,ಶ್ರೀಮಂತಿಕೆಯನ್ನು ತರಬಹುದೇ ವಿನಾ ನಮ್ಮ ಮನಸ್ಸುನ್ನು ಅದು ಶ್ರೀಮಂತಗೊಳಿಸುವುದಿಲ್ಲ.ಅದು ಶ್ರೀಮಂತವಾಗಲು ಯಶಸ್ಸು,ಸಾಧನೆ ಮುಖ್ಯ.ಸಾಧಿಸಿದವನನ್ನು ಹಣ ಹುಡುಕಿಕೊಂಡು ಬರುತ್ತದೆ.ಅವನ ಕಷ್ಟ ನಿವಾರಣೆಯಾಗುವುದು.ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು."ಛಲವೊಂದಿದ್ದರೆ ಮಾರ್ಗ" ಸಾಧನೆಯ ಹಾದಿ ಬಹು ಸರಳ.ಯಾವ ವ್ಯಕ್ತಿಯೂ ಆಸೆಗಳಿಲ್ಲದೆ ಇರಲಾರ.ಹಾಗಂತ ಅದೆಲ್ಲಾ ಈಡೇರುವುದಿಲ್ಲ.ಸಿಕ್ಕ ಅವಕಾಶದಲ್ಲಿ ಯೋಜನೆಗಳನ್ನು ರೂಪಿಸಿ ಯಶಸ್ಸು ಎಂಬ ದೇವಾಲಯದ ಒಂದೊಂದೇ ಮೆಟ್ಟಿಲು ಏರಿದರೆ ಸಾಧನೆಯೆಂಬ ದೇವರಿಗೆ ಕೈಮುಗಿಯಲು ಸಾಧ್ಯ.

 

ಛಲದ ಹಾದಿ,ಸಾಧನೆಯತ್ತ ಪಯಣ ಹಠವಾದಿ ಮಾನವನ ಜೀವಿತದ ಸಾರ್ಥಕ ಕ್ಷಣ.ಇದು ನಮಗೂ,ನಿಮಗೂ, ಎಲ್ಲರಲ್ಲೂ ಸಾಧ್ಯ.ಮಾಡುವ ಮನಸ್ಸು,ಛಲ,ಧ್ರಡ ಸಂಕಲ್ಪ ನಮ್ಮನ್ನು ಆಕಾಶದ ನಕ್ಷತ್ರವಾಗಿಸಬಲ್ಲದು.ಯುಗಯುಗಗಳಲ್ಲಿ ನಮ್ಮ ಹೆಸರು ಮಿನುಗಬಲ್ಲದು.ನಮ್ಮಲ್ಲಿನ ಗಾಢನಿದ್ರೆಯಲ್ಲಿರುವ ನಮ್ಮ ಛಲ,ಸಾಧನೆಯ ಮನಸ್ಸುನ್ನು ಬಡಿದೆಬ್ಬಿಸಿದರೆ ಅದು ಮಾಡುವ ಕಾರ್ಯ ಸ್ವತಃ ನಿಮಗೇ ಆಶ್ಚರ್ಯವಾಗುವುದು.ನೂರಾರು ಜನರ ಬಾಯಲ್ಲಿ ನೀವು ನಲಿದಾಡಬಹುದು.ಹಿಂದೆ ಟೀಕಿಸಿದ ಜನ ಈಗ ನಿಮ್ಮ ಬಳಿ ಬರಬಹುದು,ನಿಮ್ಮ ಸಹಾಯ ಕೇಳಬಹುದು,ನಿಮ್ಮನ್ನೇ ಅವಲಂಬಿಸಬಹುದು.ಇದೆಲ್ಲಾ ಸಾಧ್ಯ.ಹೌದು!!,ಅದು ನಿಮ್ಮಿಂದ ,ನಿಮಗಾಗಿ,ನಿಮಗೋಸ್ಕರ ನಿಮ್ಮಲ್ಲೇ ಇರುವ ಛಲ,ನಂಬಿಕೆ,ಆತ್ಮವಿಶ್ವಾಸ,ಸಾಧನೆಯತ್ತ ನಿಮ್ಮ ತುಡಿತದಿಂದ,ನಿಮಗೆ ಗೊತ್ತಾಗದಂತೆ ನೀವು ಯಶಸ್ಸಿನ ಶಿಖರ ಏರಬಹುದು.ಅದು ನಿಮ್ಮ ಕೈಯಲ್ಲೇ ಇದೆ."ಏಳಿ,ಎದ್ದೇಳಿ,ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ವಿದ್ಯುತ್ ವಾಣಿಯನ್ನು ನಾವು ಅನುಸರಿಸಬೇಕು.ನಮ್ಮ ಛಲವೇ ನಮ್ಮ ಯಶಸ್ಸಿನ ದಾರಿದೀಪವಾಗಬೇಕು.

 

- ನಾಗಭೂಷಣ ಗುಮಗೋಡು.