ಭಾನುವಾರ, ಅಕ್ಟೋಬರ್ 21, 2012

ಪಿಸುಮಾತು

ಅವಳ ಮಾತು ನಿದ್ದೆಗೆಡಿಸಿತು,
ಅವಳ ನಗುವಿನ ಆಳ ಮನ ಅರಳಿಸಿತು,.
ಅವಳ ಮುಗ್ದ ಕಣ್ಣುಗಳು ಪ್ರೀತಿಯ ಮಾತನಾಡಿಸಿತು,
ಅವಳ ಅಗಲಿಕೆಯ ನೋವು ಇಂದೆನಗೆ ಕಾಡಿತು.


ಅವಳ ಮಾತು ಹೊಳೆಯುವ ಸ್ಪಟಿಕದಂತೆ,
ಮಗುವಿನ ಅವಳ ಮನಸ್ಸು ನನ್ನ ಮಗುವಾಗಿಸಿತು,
ಅವಳ ಕಿವಿಯ ಓಲೆ ನನ್ನ ಉಯ್ಯಾಲೆಯಾಡಿಸಿತು.
ಅವಳ ಹಣೆಯ ಕುಂಕುಮದ ಬಿಸಿ ಎನಗೆ ತಾಕಿತು.


ಅಲ್ಲಿತ್ತು ಕನಸು ನೂರಾರು,
ಭಾವನೆಗಳ ಗಾಳಿಪಟ ಎರಡು ಮನಸಿನ ಪಿಸುಮಾತು
ಅವಳಗುಳಿ ಕೆನ್ನೆಯಲ್ಲಿ ಅರಳಿತ್ತು ಸಂತಸದ ಬಿಂಬ.
ಚಿತ್ತಾರ ಬಿಡಿಸಿತ್ತು ಅವಳ ಸಿಹಿಮುತ್ತು..


ಕಣ್ಣಿಟ್ಟು ನೋಡಿದೆ ಅವಳ ಕಣ್ಣಲ್ಲಿ,
ಸಾವಿರ ಆನೆಯ ಬಲ ತುಂಬಿತು ನನ್ನ ಮನದಲ್ಲಿ,
ಅದೇನೋ ಹೊಸ ಹೊಸ ವಿಸ್ಮಯಕಾರಿ ಪ್ರಪಂಚ,
ಮಿಡಿವ ಮನಸಿಗೆ ಪ್ರೀತಿಯ ಸಲಾಕೆ.


ಅವಳ ಚಿಂತೆ ನನಗೆ ನೋವು,
ಅವಳ ಅಳು ನನಗೆ ಆಘಾತ,
ಅವಳ ಪ್ರೀತಿಯ ನುಡಿ ನನಗೆ ಸ್ವರ್ಗದ ಬಾಗಿಲು,
ಅವಳ ಹೂ ನಗೆ ನನಗೆ ಸವಿಮಾತಿನ ಭರವಸೆ.




-ನಾಗಭೂಷಣ ಗುಮಗೋಡು.

ಶುಕ್ರವಾರ, ಅಕ್ಟೋಬರ್ 19, 2012

ಎದ್ದು ಬಾ ಗೆಳೆಯಾ

ಕವಿದ ಕಾರ್ಮೋಢ ಸೀಳಿ ಬಾ ನೀನು ಮಿಂಚಂತೆ,
ಸಿಡಿಲಿಗಿಂತ ಬಿರುಸಾಗಿ ಎದ್ದು ಬಾ,
ಅನ್ಯಾಯ ಅನಾಚಾರವ ಬಡಿದಟ್ಟು ಬಾ,
ಕೆಚ್ಚೆದೆಯ ದಿಟ್ಟ ಹೆಜ್ಜೆ ಇಟ್ಟು ಬಾ..

ಸಾಂಸ್ಕ್ರತಿಕ ನಡೆನುಡಿಯ ನೀ ತೋರು ಬಾ,
ಸಜ್ಜನ ಸಂಪನ್ನನಾಗಿ ಬಾ,
ಹುಸಿಯ ನುಡಿಯದಿರು,ಸತ್ಯವೇ ನಮ್ಮ ತಾಯಿ,ತಂದೆ,
ಕಡಲ ಬೋರ್ಗರೆತವ ಮೀರುವ ಕೊಳಲಿನ ಧ್ವನಿಯಾಗು ಬಾ,


ಯಾರೂ ಅಳಿಸಲಾಗದಂತ ಅಚ್ಚಳಿ ನೀನಾಗು ಬಾ,
ಎದ್ದು ಬಾ ಗೆಳೆಯಾ,ಕಲ್ಲು ಮುಳ್ಳುಗಳ ಸರಿಸಿ ಬಾ,
ವಿಷಕಾರುವ ಸರ್ಪಗಳಿಗೆ ವಿಷಕಂಠನಾಗಿ ಬಾ,
ಹದ್ದಿನಂತೆ ಎರಗುವವರ ಸದ್ದಡಗಿಸು ಬಾ,

ಆತ್ಮವಿಶ್ವಾಸದ ಖನಿಯಾಗು ಬಾ,ಹೀಗೆಳೆಯುವರ ಮೆಟ್ಟಿ ಬಾ,
ಹುಚ್ಚು ನಾಯಿಗಳ ಹುಚ್ಚು ಓಡಿಸು ಬಾ,
ನೀ ನಮ್ಮ ನೇತಾರ,ಹಿಡಿ ನೀ ಜನ ಸರ್ಕಾರ,
ಕಾನೂನನ್ನು ರಕ್ಷಿಸು ಬಾ,ಅವ್ಯವಹಾರವ ಬಡಿದೊಡಿಸು ಬಾ,
ಸಮ್ರದ್ದಿಯ ತೋರು ಬಾ,ಸಂಪತ್ತನ್ನು ನೀಡು ಬಾ..


ಎದ್ದು ಬಾ ಗೆಳೆಯಾ ಎದ್ದು ಬಾ.....!



- ನಾಗಭೂಷಣ ಗುಮಗೋಡು.

ಗುರುವಾರ, ಅಕ್ಟೋಬರ್ 18, 2012

ಜೋಕೆ...!

ಎಲ್ಲಿ ಹೋಯಿತು ನಿಮ್ಮ ಸ್ವಾತಂತ್ರ್ಯದ ಚೌಕಟ್ಟು?
ಸಂವಿಧಾನ ನೀಡಿದ ಸ್ಥಾನಮಾನ.
ಮೂರು ಕಾಸಿಗೆ ಹರಾಜು ಹಾಕುವ ನಿಮಗೆ,
ಏನೆಂದು ಹೇಳಬೇಕು ಶ್ರೀಸಾಮಾನ್ಯರು?


ಎಲ್ಲಿದೆ ಬೆಲೆ ನಿಮಗೆ?ನ್ಯಾಯ ನೀತಿ,ಸತ್ಯಾಸತ್ಯತೆಯುಂಟೇ?
ನಿಮ್ಮ ಮಾಹಿತಿಗಳು,ವಾರ್ತಾವಾಹಿನಿಗಳು ...ಶವಪೆಟ್ಟಿಗೆಗಳು.
ಪೊಳ್ಳು ಸುದ್ದಿಯ ವಾರ್ತಾವಾಹಿನಿಗಳಿಗೆ ಧಿಕ್ಕಾರವಿರಲಿ,
ಕೆಲಸಕ್ಕೆ ಬಾರದ ಮಾಯಾಪೆಟ್ಟಿಗೆಯ ಮಾಯಾಜಾಲ ನಮಗೇಕೆ?


ಯಾವ ಸ್ವಾಮಿ ಕಾವಿ ಬಿಚ್ಚಿದರೇನು?
ನಮಗೇನು ಲಾಭ?ನಿಮಗದು ಮಾತ್ರ ಲಾಭ ದುಡ್ಡಿನ ಸಂತೆ,
ಹಣದ ವ್ಯಾಮೋಹ ಪ್ರಚಾರದ ತವಕ,
ಗಬ್ಬು ಎಬ್ಬಿಸಿದಿರಿ ಸುದ್ದಿಮಾಧ್ಯಮವ.


ಕಿತ್ತು ಹೋದ ಕೆಲಸವಷ್ಟೇ ನಿಮ್ಮ ಪ್ರಚಾರ,
ನೋಡುವವರಿಗಿಲ್ಲವೇ ನಾಚಿಕೆ,ಮಾನ.,
ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ
ನಿಮಗೆ ಸಿಗುವುದೊಂದೇ ಸುದ್ದಿಯೇ???


ಎಲ್ಲಿ ತೋರಿಸುವಿರಿ ನೀವು, ತುತ್ತಿಲ್ಲದ ರೈತನ?
ನೀರಿಲ್ಲದ ಊರನ್ನು,ಬಸ್ಸಿಲ್ಲದ ಹಳ್ಳಿಯನ್ನು,
ಶಾಲೆ ಕಾಣದ ಮಕ್ಕಳನ್ನು,ಏನೂ ಇಲ್ಲದ ಹೈಕಳನ್ನು?
ಸಮಾಜದ ಕಷ್ಟ ನಷ್ಟವನ್ನು ,ಜನರ ನೋವನ್ನು?


ನೇರ ಹೆಜ್ಜೆ ಇಡಿರಿ,ತಪ್ಪು ಹೆಜ್ಜೆ ಇಡಬೇಡಿ,
ಶಿರಸ್ತ್ರಾಣ ಧರಿಸಿ,ಕಲ್ಲು ಬಿದ್ದಾವು ಜೋಕೆ ..!
ಭವಿಷತ್ ಗೆ ಮಾರಕ ಈ ನಿಮ್ಮ ವಾಹಿನಿಗಳು,
ಸರಿದಾರಿಗೆ ಬರದಿದ್ದರೆ ಜನತೆಯೇ ಉತ್ತರಿಸುತ್ತಾರೆ ಜೋಕೆ...!




- ನಾಗಭೂಷಣ ಗುಮಗೋಡು.

ಸೋಮವಾರ, ಅಕ್ಟೋಬರ್ 15, 2012

ಪ್ರೇಮಖೈದಿಗಳು

ಅವಳ ಆ ನಗು ಇವನ ನೋವ ಮರೆಸಿತ್ತು,
ಆ ಮುಗ್ಧ ನೇತ್ರಗಳಲ್ಲಿ ಸಾಂತ್ವಾನದ ಮಾತಿತ್ತು.
ಮಾರ್ಗದರ್ಶನದ ದಾರಿದೀಪವಿತ್ತು,
ಕಲಿಯುವ,ಕಲಿಸುವ ತವಕವಿತ್ತು.


ಆದರೆ ಕಂಡೂ ಕಾಣದ ಅಳುಕಿತ್ತು ಮನದಲ್ಲಿ,
ಎಲ್ಲೋ ತಿವಿಯುವ ಮನಸಿನ ದುಗುಡ,
ಹೇಳಿಕೊಳ್ಳಲು ಮನಸಿದ್ದರೂ ಆಗದ ವಿಚಿತ್ರ ಸಂಕಟ,
ಯಾರ ಬಳಿ,ಯಾರ ವಿರುದ್ಧ ಹೇಗೆ,ಏನು ಹೇಳಲಿ ಎಂಬ ತಳಮಳ.


ಮನಸ್ಸಿನಲ್ಲಿ ಅವನ ಬಗ್ಗೆ ನಾನಾ ಯೋಚನೆ,
ಅವನ ಮೇಲೆ ಕಾಣದ ಪ್ರೀತಿ,ತನ್ನವನಾಗಬೇಕೆಂಬ ಆಸೆ,
ಬಯಕೆಗಳೇನೋ ನೂರಾರು,ಅದೆಲ್ಲಾ ಸಾಧ್ಯವೇ?,
ಅವನ ಬಳಿ ಕೇವಲ ಸ್ನೇಹಿತೆ,ಮನಸ್ಸಿಗೆ ನೂರೆಂಟು ದ್ರೋಹ.!


ಅವಳ ಮಾತು ಇವನಿಗೆ ಸ್ಪಟಿಕದ ಮುತ್ತುಗಳು,
ಅವಳಿಗೆ ಇವನು ದೇವಮಾನವ,ತನ್ನೊಡೆಯನಾಗಲಿ ಎಂಬಾಸೆ,
ವಿಧಿ ಲಿಖಿತ ಬೇರೆ ಇತ್ತು,ಅವಳಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು,
ಅವನಲ್ಲೂ ಇವಳ ಮೇಲೆ ವ್ಯಾಮೋಹ ಹೇಗೆ ಹೇಳುವನು ಅವಳಿಗೆ??.


ಎರಡು ಜೀವಗಳ ಸ್ನೇಹ, ಒಳಗೊಳಗೆ ಅದು ಪ್ರೇಮ,
ಸುಂದರ ವದನಗಳಲ್ಲಿ ಮೇಲೆ ನಗು,ಒಳಗೆ ನೋವಿನ ಛಾಯೆ,,
ಹೇಳಿಕೊಳ್ಳಲು ಸ್ನೇಹ ಕಳೆದುಕೊಳ್ಳುವ ಭಯ,ಆತಂಕ,
ಅವನೂ ಹೇಳುಲಾರ,ಇವಳೂ ಹೇಳಲಾರಳು,,ಇವರಿಬ್ಬರು ಪ್ರೇಮಖೈದಿಗಳು.




- ನಾಗಭೂಷಣ ಗುಮಗೋಡು.

ಪ್ರೀತಿ

ಯಾರೋ ಗೀಚಿದ ತಲೆಬುಡುವಿಲ್ಲದ ಅಕ್ಷರ,
ಅರ್ಥಕ್ಕೆ ಬಾರದು,ತರ್ಕಕ್ಕೂ ನಿಲುಕದು,
ಸೂರ್ಯಚಂದ್ರರ ಅಂತರದಷ್ಟು ಇದರ ವಿಷಯ,
ಹುಟ್ಟಿಸಿದವರು ಯಾರೋ,ಸಾಯಿಸುವವರಂತೂ ಇಲ್ಲ.


ಸಾಹಿತಿಯ ಸಾಹಿತ್ಯವಲ್ಲ,ಕವಿಯೊಬ್ಬನ ಕವಿತೆಯಲ್ಲ,
ಬಂಧವಿದು ಎರಡು ಹ್ರದಯಗಳ ಸಂಗಮ,
ಅಕ್ಷರಕ್ಕೆ ಅರ್ಥವುಂಟು ವಿಭಜಿಸಲು ಆಗದು,
ಬಣ್ಣರೂಪಗಳಿಲ್ಲ,ಪ್ರಾಣಿಸಂಕುಲದ ನಂಟು..


ಇದಕ್ಕೆ ಸಿಲುಕದವರಿಲ್ಲ,ನೋವು ನಲಿವು ಹೊರತಲ್ಲ,
ಬಡವಬಲ್ಲಿದನಿಲ್ಲ,ಕೂಲಿ ಸೇವಕರಿಲ್ಲ,ಅಲ್ಲಿಹುದು ಲೋಕದ ತಿರುಳು,
ಡಾಂಬರು,ಮಣ್ಣು ರಸ್ತೆಗಳಿಲ್ಲ,ಅಲ್ಲೊಮ್ಮೆ ಇಲ್ಲೊಮ್ಮೆ
ಚುಚ್ಚಿ ರಕ್ತಕಾರುವ ವೇದನೆ,ಅದರ ಎಷ್ಟೋ ಪಟ್ಟು ಸುಖಸಾಗರ..


ರಕ್ತ ಹರಿದಾಡುವ ಜೀವಗಳ ಕೆಂಪುಹನಿ,
ಹ್ರದಯ ಹ್ರದಯಗಳ ಭಾವಾಂತರಂಗದ ಮಿಡಿತದ ಧ್ವನಿ.,
ಪ್ರತಿ ಕ್ಷಣಕ್ಷಣಗಳ ಉನ್ಮಾದದ ತವಕ,
ವರ್ಣಿಸಲು ಸಾಧ್ಯವಾಗದು ಅದೆಂತಾ ವೈಭವ.!!


ಧ್ಯಾನ ನಿರತನಿಗೂ ಉಂಟು,ತಲೆ ಕಡಿಯುವವನಿಗೂ ಉಂಟು,
ಸ್ನೇಹಿತ,ಶತ್ರುವಲ್ಲೂ ಉಂಟು,ಹರೆಯದ ಪೋರರಲ್ಲುಂಟು,
ತಾಯಿಯ ಮಮತೆಯಲ್ಲುಂಟು,ಅಜ್ಜಿಯ ತಾಂಬೂಲದಲ್ಲುಂಟು,
ಅದೊಂದು ಅವ್ಯಕ್ತ ಅನುಭವ,ಸಹಾನುಭಾವ ಅದೇ ಪ್ರೀತಿ......




- ನಾಗಭೂಷಣ ಗುಮಗೋಡು.

ಶುಕ್ರವಾರ, ಅಕ್ಟೋಬರ್ 5, 2012

ಮರ್ಮ


ಕನಿಕರವ ತೋರುವವರಾರು?

ಕಳವಳಗೊ೦ಡ ಮನಸಿಗೆ,

ಜೀವನವೆ೦ಬುದೊ೦ದು ಗುಲಾಬಿ ಗಿಡ,

ಹೂವು ಮುಳ್ಳುಗಳ ಸಮಾಗಮ,

ಹೂವು ಉದುರುವುದು , ಮುಳ್ಳು ಚುಚ್ಚುವುದು,

ಅದು ನೋಡಲಷ್ಟೇ ಚ೦ದ,ಇರಿತ ಬಹಳ.

ಹೇಗೋ ಬೆಸೆದ ಸ್ನೇಹ,ಮಾತಲೊ೦ದಿಷ್ಟು ಪ್ರೀತಿ,ಮಮತೆ.

ಕಡಿಯಿತು ಭಾವಗಳ ಬ೦ಧ ಕಾರಣಗಳಿಗೆ ನಿಲುಕದೆ...,

ಅದಾಗೇ ಆಯಿತು ಬೆಸುಗೆ,ಸಲುಗೆ,ಒಡನಾಟಗಳ ಸೆಲೆ.

ಮುರಿದುಬಿತ್ತು ಒ೦ದೇ ದಿನ ಕಾರಣವಲ್ಲದ ಕಾರಣದಿ೦ದ.

ಏನಿದರ ಮರ್ಮ ಅರಿಯಲಾರೆವೆ ಸರಪಣಿಯ?

ಕರುಣಾಮಯಿ ದೇವ ನೀನೊಬ್ಬ ಬಲ್ಲೆ ಜನ್ಮಾ೦ತರದ ಬ೦ಧ.

ಗೆಳೆಯನಾದರೇನು?ಗೆಳತಿಯಾದರೇನು?ಕಾರಣವ ಹೇಳಬಹುದಲ್ಲವೇ?

ಬಿಡಲಾರದ ಸ್ನೇಹ,ಹ೦ಚಿಕೊಳ್ಳಲಾಗದೇ ಹ೦ಚಿಕೊ೦ಡ ಮಾತು..!

ಎಲ್ಲಾ ಮರೆತು ಹೋಯಿತೇ?ಒ೦ದೇ ದಿನದಲ್ಲಿ..

ನಾನಿ೦ದು ಮಾತನಾಡಲಾರೆ,ಮೌನವೇ ನನ್ನುತ್ತರ.

ಕಾಯುತಿಹೆನು ನಿನ್ನ ಪುನರಾಗಮನಕೆ,ನಿನ್ನ ಸ್ನೇಹಕೆ,

ನಿನ್ನ ಅಭಿರುಚಿ ಬಲ್ಲ ಅಭಿವ್ಯಕ್ತಿ ನಾನು.

ಹೋದೆ ಎಲ್ಲಿಗೆ ಬಹುದೂರ ?,ಕಣ್ಣೀರ ತ೦ದು.

ಮಾರುತವಲ್ಲವಿದು, ಚ೦ಡಮಾರುತ ಬೀಸಿಹೋದೆ ನೀನು.

ಬಲ್ಲವರು ಆಡುವರು,ಆಡುತಿಹರು ತಪ್ಪು ತಪ್ಪು ನನ್ನದೆ೦ದು.

ಅರಿಯದೇ ಮಾಡಿದ ತಪ್ಪುಯಾವುದೆ೦ದು ಯೋಚಿಸಿದೆ.

ಆಲೋಚಿಸಿದೆ,ಒ೦ದೂ ಹೊಳೆಯಲಿಲ್ಲ,ತಿಳಿಯಲಿಲ್ಲ,

ನಿನ್ನ ಅಜ್ನಾತವಾಸದ ಮರ್ಮ ನನಗೆ೦ದು ತಿಳಿಯುವುದು??????
 

 

 

 

- ನಾಗಭೂಷಣ ಗುಮಗೋಡು.

ಬುಧವಾರ, ಅಕ್ಟೋಬರ್ 3, 2012

ಕಾವೇರಿ ಹೋರಾಟ

ಮೂಕವಾಗಿ ರೋದಿಸುತಿದೆ
ಮಾತುಬಾರದ ಗಿಡಮರಗಳು..
ಮಾರಣಾ೦ತಿಕ ಹೊಡೆತ ತಿನ್ನಲು ಆಗದೆ.
ಗಾಯದ ಮೇಲೆ ಉಪ್ಪುಸುರಿದ೦ತೆ ಒಣಖಾರ..
ಹರಿದಿದೆ ನೂರಾರು ಜೀವಗಳ ರಕ್ತಕೋಡಿ.
ನಿ೦ತಿದೆ ಬೆವರಹನಿಯ ಉಪ್ಪಾದ ನೀರು.
ಸುಡುಬಿಸಿಲಲ್ಲೂ ದೇಹ ದ೦ಡಿಸುವ ಜೀವ,
ಸಣಕಲಾಗಿದೆ ಕೂಗಿ ಕೂಗಿ.
ಕೊಡಲಿಯ೦ತಹ ಪೆಟ್ಟು ,ನಿಲ್ಲಬಲ್ಲೆವು  ನಾವು ಮೆಟ್ಟಿ.
ನೇಗಿಲಯೋಗಿಯ ನೇಗಿಲು ತು೦ಡಾಯಿತೇ??
ಕಾವೇರಿಸುವ ಹೋರಾಟ, ಕಾವೇರಿಗಾಗಿ ಜೀವ.
ಕರುನಾಡ ತಾಯಿಯ ಮಡಿಲಮಕ್ಕಳ ಹೋರಾಟ
ತಮಗಲ್ಲ ತಮ್ಮನ೦ಬಿದವರಿಗಾಗಿ,ಅವರ ಬೆಳೆಗಾಗಿ,
ಇ೦ದಲ್ಲ,ಮು೦ದಿನ ಜೀವನಕ್ಕಾಗಿ,ಸರ್ಕಾರದ ಬೊಕ್ಕಸಕ್ಕಾಗಿ.
ಸುಮ್ಮನೆ ಕುಳಿತಿಲ್ಲ ಹೋರಾಟ ನಮ್ಮ ಹಾದಿ
ಸಾದಿಸುವೆವು ವಿಜಯ,ಉಳಿಸಿಕೊಳ್ಳುವೆವು ತಾಯೇ ನಿನ್ನ ,
ಕೆಚ್ಚೆದೆಯ ಸೇವಕರು ನಾವು ಕಾಯುವೆವು ನಿನ್ನ.
ಕಾವೇರಿ,ಹರಿವ ನದಿಯಲ್ಲ ನೀ ನಮ್ಮ ಜೀವ ,ಉಸಿರು.
ನೀ ಕರುನಾಡ ಹೆಮ್ಮೆ ,ನೀ ಜೀವನದಿ,
ಬಳಲಿ ಬೆ೦ಡಾದರೂ ಬೆನ್ನುಬಾಗಿಸೆವು,
ರಕ್ತಕೊಟ್ಟೆವು ನಿನಗಾಗಿ ತಾಯೇ,ನಿನ್ನ ಬಿಡೆವು.
ಕೊನೆಯವರೆಗೂ ಹೋರಾಟ  ಉಸಿರು ನಿಲ್ಲುವವರೆಗೂ ಹೋರಾಟ,
ಜಯಹೇ ಕರುನಾಡ ಮಾತೇ.






- ನಾಗಭೂಷಣ ಗುಮಗೋಡು.